ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಜನತಾ ದರ್ಶನ: 170ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ, ಕಾಡಾನೆ ಹಾವಳಿ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರದ ಭರವಸೆ

ಕೊಡಗು ಜಿಲ್ಲೆಯಲ್ಲಿ ನಿನ್ನೆ (ಸೋಮವಾರ) ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮ ನಡೆಸಿಕೊಟ್ಟರು.

ಕೊಡಗಿನಲ್ಲಿ  ಜನತಾ ದರ್ಶನ
ಕೊಡಗಿನಲ್ಲಿ ಜನತಾ ದರ್ಶನ

By ETV Bharat Karnataka Team

Published : Sep 26, 2023, 7:21 AM IST

Updated : Sep 26, 2023, 2:47 PM IST

ಕೊಡಗಿನಲ್ಲಿ ಜನತಾ ದರ್ಶನ

ಕೊಡಗು:ಜನತಾ ದರ್ಶನದ ಮೂಲಕ ಜನರ ಬಳಿಗೆ ಸರ್ಕಾರವನ್ನು ಕೊಂಡೊಯ್ಯುವ ಉದ್ದೇಶದಿಂದ ನಾಪೋಕ್ಲು ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ವಿನೂತನ ಪ್ರಯತ್ನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಚಾಲನೆ ನೀಡಿದರು. ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಗ್ರಾ.ಪಂ. ಅಧ್ಯಕ್ಷರಾದ ವನಜಾಕ್ಷಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಇತರರು ಪಾಲ್ಗೊಂಡಿದ್ದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಜೊತೆಗೆ ವಿವಿಧ ಇಲಾಖೆಗಳ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಮಳಿಗೆಯನ್ನು ಸಚಿವರು ಮತ್ತು ಶಾಸಕರು ವೀಕ್ಷಿಸಿದರು. ಜನತಾ ದರ್ಶನದ ಸಂದರ್ಭದಲ್ಲಿ ಸುಮಾರು 170ಕ್ಕೂ ಹೆಚ್ಚು ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾಗಿವೆ. ಕೆಲವು ಅರ್ಜಿಗಳನ್ನು ಸ್ಥಳದಲ್ಲಿಯೇ ಉಸ್ತುವಾರಿ ಸಚಿವರು ಪರಿಹರಿಸಿದರು.

ಲ್ಯಾಪ್‍ಟಾಪ್ ವಿತರಣೆ:ಇದರ ಮಧ್ಯೆ ಕಾರ್ಮಿಕ ಇಲಾಖೆ ವತಿಯಿಂದ ಸುಮಾರು 28 ಫಲಾನುಭವಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು. ಕಾನೂನು ಪದವೀಧರರಿಗೆ ಪ್ರೋತ್ಸಾಹಧನ ವಿತರಣ ನಡೆಯಿತು. ಕಂದಾಯ ಇಲಾಖೆಯಿಂದ ಹಕ್ಕುಪತ್ರ ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಸವಲತ್ತು ಒದಗಿಸಲಾಯಿತು.

"ಜಿಲ್ಲೆಯ ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬೆಂಗಳೂರಿಗೆ ಅಥವಾ ಜಿಲ್ಲಾ ಕೇಂದ್ರಕ್ಕೂ ತೆರಳಲು ಸಾಧ್ಯವಿಲ್ಲ. ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ಹಮ್ಮಿಕೊಳ್ಳಲಾಗುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಕಾಲಮಿತಿಯೊಳಗೆ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು" ಎಂದು ಸಚಿವರು ತಿಳಿಸಿದರು.

"ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಯಲ್ಲಿ ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿವೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಕಂದಾಯ, ಅರಣ್ಯ, ವಿದ್ಯುತ್, ಇತರೆ ಇಲಾಖೆಗಳ ಸಮಸ್ಯೆಗಳು ಇರುತ್ತವೆ. ಇದನ್ನು ಬಗೆಹರಿಸಲಾಗುವುದು" ಎಂದು ತಿಳಿಸಿದರು.

ಸಾರ್ವಜನಿಕರೊಬ್ಬರು ಮಾತನಾಡಿ, "ನಾಪೋಕ್ಲು ಭಾಗದಲ್ಲಿ ವಿದ್ಯುತ್ ಪರಿವರ್ತಕ ನಿರ್ಮಾಣ ಮಾಡಬೇಕು. ಕ್ರೀಡಾಪಟುಗಳಿಗೆ ಹಾಕಿ ಮೈದಾನ ನಿರ್ಮಿಸಬೇಕು. ಬಸ್ ನಿಲ್ದಾಣಕ್ಕೆ ಜಾಗ ಒದಗಿಸಲಾಗಿದ್ದು, ಗ್ರಾ.ಪಂಚಾಯಿತಿಗೆ ಜಾಗ ಹಸ್ತಾಂತರಿಸಬೇಕು. ನಾಪೋಕ್ಲು ಗ್ರಾ.ಪಂ. ಅನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕು" ಎಂದು ಮನವಿ ಮಾಡಿದರು.

ಪ್ರತಿ ತಿಂಗಳು ಜನತಾ ದರ್ಶನ:ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ, ಸರ್ಕಾರ ನುಡಿದಂತೆ ನಡೆಯುತ್ತಿದೆ. ಪ್ರತಿ ತಿಂಗಳು ತಾಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಯಲಿದ್ದು, ಗ್ರಾಮ ಮಟ್ಟದಲ್ಲಿನ ಸಮಸ್ಯೆಗಳನ್ನು ಜನತಾ ದರ್ಶನದ ಮೂಲಕ ಪರಿಹರಿಸಕೊಳ್ಳಬಹುದು. ನಾಪೋಕ್ಲು ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ಸಂಪರ್ಕ ಕಳೆದುಕೊಳ್ಳುವ ರಸ್ತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅನುಮೋದನೆ ದೊರೆತಿದೆ. ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಹಾಗೆ ಕಾಡಾನೆಗಳು ನಾಡಿಗೆ ಬರುತ್ತಿದ್ದು, ಇವುಗಳನ್ನು ತಡೆಯಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರವಸೆ:ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಭೂಮಿ ಒದಗಿಸುವುದು, ಕಾಡಾನೆ ಹಾವಳಿ ನಿಯಂತ್ರಣ ಮಾಡುವುದು, ಕಾವೇರಿ ನದಿಪಾತ್ರದಲ್ಲಿ ತ್ಯಾಜ್ಯ ವಿಲೇವಾರಿ ಸಂಬಂಧ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಹರಿಸುವಲ್ಲಿ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ದಾವಣಗೆರೆಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮ

ದಾವಣಗೆರೆಯಲ್ಲಿ ಜನತಾ ದರ್ಶನ:ಜಿಲ್ಲೆಯ ಕಡಲೆಬಾಳು ಗ್ರಾಮದಲ್ಲಿ ಜನತಾ ದರ್ಶನ ಆಯೋಜನೆ ಮಾಡಲಾಗಿತ್ತು. ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅಹವಾಲು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜನತಾ ದರ್ಶನದಲ್ಲಿ ಶೌಚಾಲಯ ಇಲ್ಲದ 150 ಅರ್ಜಿ ಹಾಗು ಇ-ಸ್ವತ್ತಿನ ಸಮಸ್ಯೆ ಬಗ್ಗೆ 425 ಅರ್ಜಿಗಳ ಸ್ವೀಕಾರ ಮಾಡಲಾಗಿದೆ. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣ ಮತ್ತು ತಕರಾರುಗಳಿದ್ದ ಪ್ರಕರಣಗಳನ್ನು ಹೊರತುಪಡಿಸಿ ಎಲ್ಲಾ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಸೂಚನೆ ನೀಡಲಾಗಿದೆ.

ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಂಡು ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಒಳಚರಂಡಿ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಬೇತೂರು ಗ್ರಾಮದಲ್ಲಿ ಈ ಹಿಂದೆ ಪೈಪ್‍ಲೈನ್ ಮಾಡುವ ಮೂಲಕ ಶೌಚಾಲಯದ ಸಂಪರ್ಕವನ್ನು ಪ್ರತಿ ಮನೆಯಿಂದ ಕಲ್ಪಿಸಲಾಗಿತ್ತು. ಇದೇ ಮಾದರಿಯಲ್ಲಿ ಕಡಲೆಬಾಳು ಸೇರಿದಂತೆ ಎಲ್ಲೆಲ್ಲಿ ಬೇಡಿಕೆ ಹೆಚ್ಚಿದೆಯೋ ಅಂತಹ ಗ್ರಾಮಗಳಲ್ಲಿ ಯುಜಿಡಿ ಪೈಪ್‍ಲೈನ್ ಮಾಡಲು ಯೋಜಿಸಲಾಗಿದ್ದು ಇದು ಗ್ರಾಮಾಂತರ ಪ್ರದೇಶದ ಮಾದರಿ ಯೋಜನೆಯಾಗಲಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:ಸಾರ್ವಜನಿಕರ ಸಮಸ್ಯೆಗಳನ್ನು ಸಕಾಲಕ್ಕೆ ಸ್ಪಂದಿಸಿ ಪರಿಹರಿಸಿ : ಸಚಿವ ದರ್ಶನಾಪೂರ್

Last Updated : Sep 26, 2023, 2:47 PM IST

ABOUT THE AUTHOR

...view details