ಕೊಡಗು: ಮಾನವನು ತನ್ನ ಮೋಜಿಗೆ ಪರಿಸರದ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಲೇ ಇರುತ್ತಾನೆ. ಪ್ರಕೃತಿಯ ನೈಸರ್ಗಿಕ ಸೌಂದರ್ಯ ಸವಿಯುವ ಬದಲು ಸುಂದರ ಪ್ರಕೃತಿಯ ಮಡಿಲನ್ನು ನಾಶ ಮಾಡಿ ಅಲ್ಲಲ್ಲಿ ರೆಸಾರ್ಟ್ ಹಾಗೂ ಹೋಂ ಸ್ಟೇಗಳಂತ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸಿಕೊಂಡು ಮಂಜಿನ ನಗರಿ ಮಡಿಕೇರಿಗೆ ಹಸಿರು ಮುಕುಟುದಂತಿರುವ ಮರಗಳ ಬುಡಕ್ಕೆ ಕತ್ತರಿ ಹಾಕುತ್ತಿದ್ದಾನೆ.
ಕೊಡ್ಲಿಪೇಟೆಯಲ್ಲಿ ವೃಕ್ಷಗಳ ಬುಡಕ್ಕೆ ಕೊಡಲಿ ಏಟು ಹೌದು.. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಪಟ್ಟಣದ ಸಮೀಪ ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಕೇರಳ ಮೂಲದ ವ್ಯಕ್ತಿಯೊಬ್ಬ ಮರಗಳನ್ನು ಕಡಿದಿರುವ ಘಟನೆ ಕೊಡ್ಲಿಪೇಟೆ ಸಮೀಪದ ಅವರೆದಾಳು ಗ್ರಾಮದಲ್ಲಿ ನಡೆದಿದೆ. ಮಾಲೀಕ ತನ್ನ 22 ಎಕರೆಯಲ್ಲಿ ರೆಸಾರ್ಟ್ ನಿರ್ಮಿಸಲು ಸುಮಾರು ಐವತ್ತು ಬೆಲೆ ಬಾಳುವ ಮರಗಳನ್ನು ಕಡಿದಿದ್ದಾನೆ. ಕೊಡಗಿನಲ್ಲಿ ಮರಗಳ ಮಾರಣ ಹೋಮ ಮುಂದುವರೆದಿದ್ದು, ಇತ್ತೀಚೆಗಷ್ಟೆ ಕೊಡಗಿನ ಸಮೀಪದ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಂಧ್ರ ಮೂಲದ ರೆಡ್ಡಿ ಎಂಬಾತ ಹೋಂ ಸ್ಟೇ ನಿರ್ಮಿಸಲು 808 ಮರಗಳನ್ನು ಧರೆಗೆ ಉರುಳಿಸಿದ್ದ.
ಕೇರಳದ ರವೀಂದ್ರನ್ ಎನ್ನುವವರು ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಅವರೇದಾಳು ಗ್ರಾಮದಲ್ಲಿ ಅರಣ್ಯ ಇಲಾಖೆಯ ಯಾವುದೇ ಅನುಮತಿ ಇಲ್ಲದೆಯೇ ತಮ್ಮ ತೋಟದಲ್ಲಿದ್ದ ವಿವಿಧ ರೀತಿಯ 50ಕ್ಕೂ ಹೆಚ್ಚು ಮರಗಳ ಬುಡಕ್ಕೆ ಕೊಡಲಿ ಇಟ್ಟಿದ್ದಾರೆ. ಇದು ಹೀಗೆ ಮುಂದುವರೆದರೆ ಕೊಡಗಿನ ಭೂಮಿ ಏನಾಗಬಹುದು, ಇದರಿಂದಲೇ ಇಡೀ ಪ್ರಕೃತಿ ನಾಶವಾಗುತ್ತಿದೆ ಎಂಬುದು ಪರಿಸರ ಪ್ರೇಮಿ ಹರೀಶ್ ಅವರ ಅಭಿಪ್ರಾಯ.
ಅರಣ್ಯ ನಾಶದಿಂದಲೇ ಕಳೆದ ವರ್ಷ ಕೊಡಗಿನಲ್ಲಿ ಭೂ ಕುಸಿತ ಉಂಟಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಇದು ಒಂದೆಡೆಯಾದರೆ ಮತ್ತೊಂದೆಡೆ ಅರಣ್ಯ ಇಲಾಖೆ ಬಡವರಿಗೆ ಒಂದು, ಸಿರಿವಂತರಿಗೆ ಒಂದು ಕಾನೂನು ಮಾಡುತ್ತಿದೆ. ಅರಣ್ಯ ಇಲಾಖೆ ನೂರಾರು ಮರಗಳು ಧರೆಗೆ ಉರುಳಿದ್ದರೂ ಜಾಣ ಕುರುಡು ವಹಿಸುತ್ತಿದೆ. ಸ್ಥಳೀಯರು ಚಿಕ್ಕಪುಟ್ಟ ಗುಡಿಸಲು ನಿರ್ಮಾಣಕ್ಕಾಗಿ ಚಿಕ್ಕ ಮರ ಕಡಿದರೂ ಕಾನೂನು ಕಟ್ಟಲೆಗೂ ಮೀರಿದ ಪ್ರಕರಣ ದಾಖಲಿಸಿ ಅಲೆಯುವಂತೆ ಮಾಡುತ್ತಾರೆ. ಆದರೆ, ದೊಡ್ಡವರು ನೂರಾರು ಮರ ಕಡಿದರೂ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಆರು ವರ್ಷಗಳ ಹಿಂದೆಯೇ ಕೇರಳ ಮೂಲದ ವ್ಯಕ್ತಿಯೊಬ್ಬರು 22 ಎಕರೆ ಭೂಮಿಯನ್ನು ಖರೀದಿಸಿದ್ದರು. ಯಾವುದೇ ಕಾರಣಕ್ಕೂ ಸ್ಥಳೀಯರಿಗೆ ತೋಟಕ್ಕೆ ಪ್ರವೇಶ ನಿಷೇಧಿಸಿದ್ದರು. ಅಲ್ಲಿ ಅಸ್ಸಾಂ ಸೇರಿದಂತೆ ಹೊರರಾಜ್ಯದ ಕಾರ್ಮಿಕರೇ ಕೆಲಸ ಮಾಡುತ್ತಿದ್ದು, ಯಾವಾಗ ನೋಡಿದರೂ ಗರಗಸ ಸದ್ದು ಮಾಡುತ್ತಲೇ ಇರುತ್ತೆ. ಸ್ಥಳೀಯರ ತೀವ್ರ ಆಕ್ಷೇಪದ ಬಳಿಕವಷ್ಟೇ ಅರಣ್ಯ ಇಲಾಖೆ ಎಚ್ಚೆತ್ತು ಪ್ರಕರಣ ದಾಖಲಿಸಿದೆ ಎಂದು ಆರೋಪಿಸುತ್ತಿದ್ದಾರೆ ಸ್ಥಳೀಯ ನಿವಾಸಿ ಧರ್ಮಪ್ಪ.
ಹಣದ ವ್ಯಾಮೋಹಕ್ಕೆ ಪ್ರಕೃತಿ ಬಲಿಯಾಗುತ್ತಲೇ ಇದೆ. ಕೊಡಗು ಇದುವರೆಗೆ ಕರ್ನಾಟಕದ ಕಾಶ್ಮೀರ, ಮಂಜಿನ ನಗರಿ, ದಕ್ಷಿಣದ ಕಾಶ್ಮೀರ ಎಂದೆಲ್ಲಾ ಸುಪ್ರಸಿದ್ಧವಾಗಿದೆ. ಆದರೆ ಕೊಡಗಿನಲ್ಲಿ ಇದೀಗ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತಿದೆ. ಅದರಲ್ಲೂ ಹೊರ ರಾಜ್ಯದ ಉದ್ಯಮಿಗಳ ಧನದಾಹಕ್ಕೆ ಕೊಡಗಿನ ಅರಣ್ಯ ಬಲಿಯಾಗುತ್ತಿರುವುದು ವಿಪರ್ಯಾಸ. ಅದೇನೆ ಇರಲಿ ಅರಣ್ಯ ಇಲಾಖೆ ಒಪ್ಪಿಗೆ ಇದ್ದೋ ಅಥವಾ ಇಲ್ಲದೆಯೋ ಕೊಡಗಿನಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಮರಗಳನ್ನು ಕತ್ತರಿಸಲಾಗುತ್ತಿದೆ. ಹೀಗಾಗಿ ಕಳೆದ ಬಾರಿ ಸಂಭವಿಸಿದ ಪ್ರವಾಹ ಮತ್ತು ಭೂ ಕುಸಿತಕ್ಕೆ ಅರಣ್ಯ ನಾಶವೇ ಕಾರಣ ಅಂತಾರೆ ಪರಿಸರವಾದಿಗಳು.