ಕೊಡಗು :ಈಗಾಗಲೇ ಮಳೆಗಾಲ ಆರಂಭವಾಗಿದೆ. ಮುಂದಿನ ಮುಂಗಾರು ಮಳೆಗಾಲದ ದಿನಗಳಲ್ಲಿ ನದಿ ಪಾತ್ರಗಳಲ್ಲಿ ನೀರಿನ ಹರಿವು ಹೆಚ್ಚಾಗಲಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಹಿತದೃಷ್ಟಿಯಿಂದ ಭಾರೀ ವಾಹನಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಹೆಚ್ಚಾಗುವ ದಿನಗಳಲ್ಲಿ ರಸ್ತೆಯ ಪರಿಸ್ಥಿತಿ ಹದಗೆಡುತ್ತದೆ. ಹಾಗೆಯೇ ಅಧಿಕ ಭಾರ ತುಂಬಿದ ಭಾರೀ ಸರಕು ಸಾಗಣೆ ವಾಹನಗಳು ದಿನನಿತ್ಯ ಸಂಚರಿಸುವುದರಿಂದ ರಸ್ತೆಯ ಬದಿಗಳ ಮಣ್ಣು ಭೂಕುಸಿತದಿಂದಾಗಿ ರಸ್ತೆಯ ಮೇಲೆ ಮಣ್ಣು ಬಿದ್ದು, ಸಂಚಾರಕ್ಕೆ ತೊಂದರೆಯಾಗಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತದೆ.
ಈ ಹಿನ್ನೆಲೆ ಸಾರ್ವಜನಿಕರ ಜೀವ ಮತ್ತು ಆಸ್ತಿಗಳ ಹಿತದೃಷ್ಟಿಯಿಂದ 16,200 ಕೆಜಿಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ವಾಹನ/ ಮಲ್ಟಿ ಆಕ್ಸಿಲ್ ಟ್ರಕ್‍ಗಳ ಸಂಚಾರ ಮತ್ತು ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ಮತ್ತು ಮರಳು ಸಾಗಾಣಿಕೆ, ಮರದ ದಿಮ್ಮಿಗಳನ್ನು ಸಾಗಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಮಳೆಗಾಲ ಮುಗಿಯುವವರೆಗೆ ನಿರ್ಬಂಧಿಸಲಾಗಿದೆ.