ಕೊಡಗು: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮೂರನೇ ದಿನವೂ ಮಳೆ ಅಬ್ಬರ ಮುಂದುವರೆದಿದೆ.
ಕೊಡಗು ಜಿಲ್ಲೆಯಲ್ಲಿ ಮುಂದುವರೆದ ವರುಣನ ಅಬ್ಬರ: ಆತಂಕದಲ್ಲಿ ನದಿ ಪಾತ್ರದ ಜನತೆ
ಕೊಡಗು ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಜಿಲ್ಲೆಯ ಮಡಿಕೇರಿ, ಭಾಗಮಂಡಲ, ಚೇರಂಬಾಣೆ ತಲಕಾವೇರಿ ಸುತ್ತಮುತ್ತ ಮಳೆಯ ಅಬ್ಬರ ಜೋರಾಗಿದೆ.
ನಿನ್ನೆ ಸಂಜೆಯಿಂದ ಸ್ವಲ್ಪ ಬಿಡುವು ನೀಡಿದ್ದ ವರುಣನ ಅಬ್ಬರ ಮತ್ತೆ ಜೋರಾಗಿದೆ. ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಬೆಳಗ್ಗೆಯಿಂದ ಜಿಲ್ಲೆಯ ಮಡಿಕೇರಿ, ಭಾಗಮಂಡಲ, ಚೇರಂಬಾಣೆ ತಲಕಾವೇರಿ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ. ನಿನ್ನೆ ಸಂಜೆವರೆಗೆ ಸುರಿದ ಮಳೆಗೆ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಹೊಲಗದ್ದೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, 2ನೇ ಬಾರಿಗೆ ಗದ್ದೆ ನಾಟಿ ಮಾಡಿದ್ದ ರೈತರು ಮತ್ತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಆಗಸ್ಟ್ ತಿಂಗಳಲ್ಲಿ ಪ್ರವಾಹದಿಂದ ಭತ್ತದ ಬೆಳೆಗಳು ಕೊಚ್ಚಿ ಹೋಗಿದ್ದವು. ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು. ಇನ್ನು ಮಳೆ ಹೆಚ್ಚಾದರೆ ಗ್ರಾಮಗಳಿಗೂ ಪ್ರವಾಹದ ನೀರು ನುಗ್ಗುವ ಆತಂಕದಲ್ಲಿ ಸ್ಥಳೀಯರು ಕಾಲ ಕಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಎರಡು ದಿನ ರೆಡ್ ಅಲರ್ಟ್ ಇರುವುದರಿಂದ ಸಹಜವಾಗಿಯೇ ಜನರಲ್ಲಿ ಭಯ ಹೆಚ್ಚಾಗಿದೆ.