ಮಡಿಕೇರಿ: ಕಳೆದ ಬಾರಿ ಪ್ರಾಕೃತಿಕ ವಿಕೋಪಕ್ಕೆ ಈಡಾಗಿದ್ದ ಕೊಡಗಿನಲ್ಲಿ ಮತ್ತೆ ಅಪಾಯದ ಕರ್ಮೋಡ ಕಾದಿದ್ಯಾ..? ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈ ಬಾರಿಯೂ ಜಲಸ್ಫೋಟ, ಭೂ ಕುಸಿತ ಆಗುತ್ತಾ ಅನ್ನೋ ಅನುಮಾನ ಸಾಮಾನ್ಯವಾಗಿ ಎಲ್ಲರಲ್ಲಿ ಆತಂಕ ಸೃಷ್ಟಿಸಿದೆ.
ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ್ದ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದ ಭೂ ವಿಜ್ಞಾನಿಗಳು ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ 13 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದಾರೆ. ಆ ಸೂಕ್ಷ್ಮ ಪ್ರದೇಶಗಳೆಂದರೆ, ನಿಡುವಟ್ಟು, ಬಾರಿಬೆಳಚ್ಚು, ಹೆಬ್ಬಟ್ಟಗೇರಿ, ದೇವಸ್ತೂರು, ತಂತಿಪಾಲ, ಬಾಡಿಗೇರಿ, ಮುಕ್ಕೊಡ್ಲು, ಮೇಘತ್ತಾಳು, ಮಕ್ಕಂದೂರು, ಉದಯಗಿರಿ, ಕಾಟಕೇರಿ, ಮದೆ (ಜೋಡುಪಾಲ), 2ನೇ ಮೊಣ್ಣಂಗೇರಿ ಎಂದು ಗುರುತಿಸಲಾಗಿದೆ.
2019ರ ಮಳೆಗಾಲದಲ್ಲೂ ಈ ಪ್ರದೇಶದಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳಾದ ಕೆ.ವಿ. ಮಾರುತಿ , ಸುನಂದನ್ ಬಸು, ಅಮರ್ ಜ್ಯೋತಿ ಅವರು ಜಿಲ್ಲೆಯ ಹಲವು ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ.