ಕೊಡಗು: ಉಕ್ರೇನ್ನಲ್ಲಿ ರಷ್ಯಾದ ಆಕ್ರಮಣ ತೀವ್ರಗತಿಯಲ್ಲಿ ಸಾಗುತ್ತಿದ್ದು, ಭಾರತೀಯರು ಸಂಕಷ್ಟಕ್ಕೊಳಗಾಗಿದ್ದಾರೆ. ಉಕ್ರೇನ್ನಲ್ಲಿ ಕೊಡಗಿನ ನಾಲ್ವರು ವಿದ್ಯಾರ್ಥಿಗಳು ಸಿಲುಕಿದ್ದು, ತಮ್ಮ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇತ್ತ ಪೋಷಕರು ಸಹ ಆತಂಕದಲ್ಲಿದ್ದು, ಮಕ್ಕಳನ್ನು ವಾಪಸ್ ಕರೆ ತರುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
ಕುಶಾಲನಗರ ತಾಲೂಕಿನ ಮೂವರು ವಿದ್ಯಾರ್ಥಿಗಳು, ವಿರಾಜಪೇಟೆ ತಾಲೂಕಿನ ಓರ್ವ ವಿದ್ಯಾರ್ಥಿ ಉಕ್ರೇನ್ನಲ್ಲಿ ಸಿಲುಕಿದ್ದಾರೆ. ಕೂಡ್ಲೂರಿನ ಚಂದನ್ ಗೌಡ, ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದ ಲಿಖಿತ್, ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮದ ಅಕ್ಷಿತಾ, ವಿರಾಜಪೇಟೆಯ ಶಾರುಖ್ ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು.
ಉಕ್ರೇನ್ನಲ್ಲಿ ಸಿಲುಕಿರುವ ಚಂದನ್ ಗೌಡ ಖಾರ್ಕಿವ್ ನಗರದಲ್ಲಿ, ಬೆಕೆಟೋವಾ ಮೆಟ್ರೊ ಅಂಡರ್ ಗ್ರೌಂಡ್ನಲ್ಲಿ ಈ ನಾಲ್ವರು ಇದ್ದಾರೆ. ಪೋಷಕರು ಮಕ್ಕಳ ಜೊತೆ ಫೋನ್ ಸಂಪರ್ಕದಲ್ಲಿದ್ದು, ಸದ್ಯಕ್ಕೆ ಸುರಕ್ಷಿತವಾಗಿರೋದಾಗಿ ಮಕ್ಕಳು ತಿಳಿಸಿದ್ದಾರೆ. ಕೂಡಲೇ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುವಂತೆ ಪೋಷಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಉಕ್ರೇನ್ನಿಂದ ತಾಯ್ನಾಡಿಗೆ ಮರಳಿದ ವಿಜಯಪುರದ ಸ್ನೇಹಾ ಪಾಟೀಲ್
ಅಲ್ಲಿ ಬಾಂಬ್ ದಾಳಿಯಾಗುತ್ತಿದ್ದು, ಮಕ್ಕಳು ಭಯಭೀತರಾಗಿದ್ದಾರೆ. ಯುದ್ಧ ಆರಂಭವಾಗಿ ಎರಡು ದಿನಗಳು ಕಳೆದಿದೆ. ವಿದ್ಯುತ್ ಸಂಪರ್ಕ ಸ್ಥಗಿತವಾದರೆ ಫೋನ್ ಸಂಪರ್ಕವೂ ಕಷ್ಟವಾಗುತ್ತದೆ. ಒಂದು ದಿನಕ್ಕಾಗುವಷ್ಟು ಆಹಾರ ಪದಾರ್ಥಗಳಿವೆಯಷ್ಟೇ. ಮುಂದೆ ಹೇಗೆ? ಏನು ಮಾಡುತ್ತಾರೆ ಎಂಬುದು ಗೊತ್ತಿಲ್ಲ ಎಂದು ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.