ಕೊಡಗು:ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಿಜೆಪಿಯ ಇಬ್ಬರು ಮುಖಂಡರಿಗೆ ಸಂಕಷ್ಟ ಈಗ ಎದುರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಡಗು ಎಸಿ ಕೋರ್ಟ್ ಆರೋಪಗಳಿಗೆ ಸೂಕ್ತ ಕಾರಣ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಹಾಗೂ ಇಂದೇ ಕೋರ್ಟ್ಗೆ ಹಾಜರಾಗುವಂತೆ ಸೂಚನೆ ನೀಡಿತ್ತು.
ಆದರೆ, ಆರೋಪಿಗಳು ನಿನ್ನೆ ಕೋರ್ಟ್ಗೆ ಹಾಜರಾಗದ ಕಾರಣ, ಮತ್ತೆ ದಿನಾಂಕವನ್ನು ನಿಗದಿ ಮಾಡಿ ಆದೇಶಿಸಲಾಗಿದೆ. ಮತ್ತೊಂದು ಕಡೆ ಗಡಿಪಾರು ನೋಟೀಸ್ ಹೊರಡಿಸಿರುವುದನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಮಡಿಕೇರಿ ನಗರದ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ಮಾಡಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ?:2022ರ ಅಕ್ಟೋಬರ್ ತಿಂಗಳಲ್ಲಿ ಮಡಿಕೇರಿಯಲ್ಲಿ ಮಳೆಯ ಅವಾಂತರಗಳಿಂದಾಗಿ ಅನೇಕ ಕಡೆ ಭಾರಿ ಹಾನಿ ಸಂಭವಿಸಿತ್ತು. ಇದನ್ನು ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಕೊಡಗಿಗೆ ಭೇಟಿ ಕೊಟ್ಟಿದ್ದರು. ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು ಸಾವರ್ಕರ್ ವಿರುದ್ದ ನೀಡಿದ್ದ ಹೇಳಿಕೆಯಿಂದ ಕೆರಳಿ ಕೆಂಡಾಮಂಡಲವಾಗಿದ್ದ ಬಿಜೆಪಿ ಕಾರ್ಯಕರ್ತರು ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮದಲ್ಲಿ ಇವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೇ ವೇಳೆ, ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಸಿದ್ದರಾಮಯ್ಯ ಅವರು ಇದ್ದ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಇಬ್ಬರ ಮೇಲೆ ಎಫ್ಐಆರ್ ಕೂಡ ದಾಖಲು ಮಾಡಲಾಗಿತ್ತು. ಅಲ್ಲದೇ ಈ ಘಟನೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗದ್ದಲ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.