ಕೊಡಗು : ಮಡಿಕೇರಿ ತಾಲೂಕಿನ ಬೋಯಿಕೇರಿ ಸಮೀಪದ ಸಿಂಕೋನ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಟೊಯೊಟಾ ಇನ್ನೋವಾ ಕಾರೊಂದು ಮನೆಯ ಅಂಗಳದಲ್ಲಿ ಪಲ್ಟಿಯಾಗಿದ್ದು, ಡ್ರೈವರ್ ಸೇರಿದಂತೆ ಒಟ್ಟು ಎಂಟು ಮಂದಿ ಪ್ರವಾಸಿಗರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಒಟ್ಟು 8 ಮಂದಿ ನಿಸರ್ಗಧಾಮ ವೀಕ್ಷಣೆಗೆ ಎಂದು ಇನ್ನೋವಾ ಕಾರಿನಲ್ಲಿ ಬರುತ್ತಿದ್ದಾಗ ಸಿಂಕೋನ ಇಳಿಜಾರಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಪರಿಣಾಮ ಹೆದ್ದಾರಿ ಬದಿಯಲ್ಲಿರುವ ಮನೆಯ ಅಂಗಳದಲ್ಲಿ ಪಲ್ಟಿಯಾಗಿದೆ. ಘಟನೆಯಿಂದ ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ.
2 ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ : ಒಡಿಶಾದ ಗಂಜಾಂನಲ್ಲಿ ನಿನ್ನೆ ತಡರಾತ್ರಿ ಒಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಿಂದ 10 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಸುಮಾರು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಜಾಂ ಜಿಲ್ಲೆಯ ದಿಗ್ಪಹಂಡಿಯ ಡೆಂಗೋಸ್ಟಾ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಎರಡು ಬಸ್‌ಗಳು ನಜ್ಜುಗುಜ್ಜಾಗಿವೆ.
ರಾಯಗಢ ಜಿಲ್ಲೆಯ ಗುಡಾರಿ ಪ್ರದೇಶದಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ಒಡಿಶಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಬೆರ್ಹಾಮ್‌ಪುರ ಪ್ರದೇಶದ ಖಂಡೇಲಿ ಗ್ರಾಮದಲ್ಲಿ ಮದುವೆ ಸಮಾರಂಭ ಮುಗಿಸಿ ಹಿಂದಿರುಗುತ್ತಿದ್ದಾಗ ಬಸ್ ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ. ಗಾಯಾಳುಗಳನ್ನು ಸ್ಥಳೀಯ ಬ್ರಹ್ಮಪುರದ ಎಂಕೆಸಿಜೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರೆಲ್ಲಾ ಖಾಸಗಿ ಬಸ್ನ ಪ್ರಯಾಣಿಕರಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.