ಕೊಡಗು: ಅದು ಪ್ರವಾಸಿಗರ ಪಾಲಿನ ಸ್ವರ್ಗ. ಆದ್ರೆ, ಅಲ್ಲಿನ ಜನರಿಗೆ ಮಾತ್ರ ಉತ್ತಮ ಆಸ್ಪತ್ರೆ ಸೌಲಭ್ಯವೂ ಇಲ್ಲದೆ ನರಕದಂತಾಗಿದೆ. ಹಾಗಾಗಿ ಇಲ್ಲಿನ ಜನ ನಮಗೆ ಸುಸಜ್ಜಿತ ಎಮರ್ಜೆನ್ಸಿ ಆಸ್ಪತ್ರೆ ಬೇಕೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ.
We Need Emergency Hospital In Kodagu ಎನ್ನುವ ಟ್ವಿಟ್ಟರ್ ಅಭಿಯಾನ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಕೊಡಗಿನ ಈ ಅಭಿಯಾನಕ್ಕೆ ಇಡೀ ಚಿತ್ರರಂಗವೇ ಬೆನ್ನಿಗೆ ನಿಂತಿತ್ತು. ಆದರೆ, ಈ ಅಭಿಯಾನಕ್ಕೆ ಸರ್ಕಾರ ಕ್ಯಾರೆ ಎನ್ನಲಿಲ್ಲ. ಹೀಗಾಗಿ ತಮ್ಮ ಅಭಿಯಾನ ತೀವ್ರಗೊಳಿಸಿ ಕೊಡಗಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಮಾಡಲೇ ಬೇಕು ಎಂದು ನಿರ್ಧರಿಸಿದ ಕೊಡಗಿನ ಯುವಪಡೆ ಟ್ವಿಟ್ಟರ್ ಅಭಿಯಾನ ಬಳಿಕ ರ್ಯಾಪ್ ಸಾಂಗ್ ಬರೆದು ಕೊಡಗಿಗೆ ಆಸ್ಪತ್ರೆ ಬೇಕು ಎಂದಿದ್ರು. ಈಗ ಬೈಕ್ ರೈಡ್ ಮಾಡೋ ಮೂಲಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬೈಕ್ ರೈಡ್ ಅಭಿಯಾನ ಬೈಕ್ ರೈಡ್ ಮೂಲಕ We Need Emergency Hospital In Kodagu ಅಭಿಯಾನ ಮತ್ತಷ್ಟು ವಿಭಿನ್ನವಾಗಿ ನಡೆದಿದೆ. ಬೆಂಗಳೂರಿನಿಂದ ಕೊಡಗಿಗೆ ಬೈಕ್ ಜಾಥ ಕೈಗೊಳ್ಳುವ ಮೂಲಕ ಕೊಡಗಿಗೆ ಸುಸಜ್ಜಿತ ಆಸ್ಪತ್ರೆ ಕೊಡಿ ಅಂತ ಕೊಡಗಿನ ಬೈಕ್ ಸವಾರರು ಒತ್ತಾಯಿಸುತ್ತಿದ್ದಾರೆ. 20 ಕ್ಕೂ ಅಧಿಕ ಬೈಕ್‌ಗಳಲ್ಲಿ ಬೆಂಗಳೂರು, ಮಂಡ್ಯ, ಮೈಸೂರು, ಗೋಣಿಕೊಪ್ಪ, ಮಡಿಕೇರಿ ಮಾರ್ಗದಲ್ಲಿ ಸಂಚರಿಸಿದ ಅವರು ಕೊಡಗಿಗೆ ಏಕೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಬೇಕು, ಅದರ ಅನಿವಾರ್ಯತೆ ಜನರಿಗೆ ಎಷ್ಟಿದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಪ್ರವಾಸಿಗರ ಸ್ವರ್ಗ, ಕಾಫಿ, ಕಿತ್ತಳೆಯ ಬೀಡು, ಕಾವೇರಿಯ ತವರು ಹೀಗೆಲ್ಲ ಖ್ಯಾತಿ ಪಡೆದಿರುವ ಕೊಡಗು ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತೆ. ಈ ಮಾರ್ಗದಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ಜೊತೆಗೆ ಕುಗ್ರಾಮದ ಜನ ಸಣ್ಣ ಅನಾರೋಗ್ಯ ಬಂದರೂ ಮೈಸೂರು ಅಥವಾ ಮಂಗಳೂರು ಆಸ್ಪತ್ರೆgಳನ್ನು ಅವಲಂಬಿಸಬೇಕು. ಹಾಗಾಗಿ ತುರ್ತಾಗಿ ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೇ ಬೇಕು ಎಂದು ಕಾಫಿ ನಾಡಿನ ಜನ ಆಗ್ರಹಿಸುತ್ತಿದ್ದಾರೆ. ಅವರ ಬೇಡಿಕೆಗೆ ಸರ್ಕಾರ ಇನ್ನಾದರೂ ಸ್ಪಂದಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.