ಕೊಡಗು: ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದಿದ್ಧ ಭೀಕರ ಮಳೆಯಿಂದಾಗಿ ಭಾರೀ ಪ್ರವಾಹ ಮತ್ತು ಭೂ ಕುಸಿತ ಉಂಟಾಗಿತ್ತು. ಇದೀಗ ಮತ್ತೆ ಜಿಲ್ಲೆಯಲ್ಲಿ ಇನ್ನೊಂದು ವಾರಗಳ ಕಾಲ ಮಳೆಯಾಗುವ ಮುನ್ಸೂಚನೆಯಿದೆ. ಹೀಗಾಗಿ ಜೂನ್ ತಿಂಗಳಲ್ಲಿ ಜಿಲ್ಲೆಗೆ ಆಗಮಿಸಿದ್ದ ಎನ್ಡಿಆರ್ಎಫ್ ತಂಡವನ್ನು ಜಿಲ್ಲೆಯಲ್ಲೇ ಉಳಿಸಿಕೊಳ್ಳಲಾಗಿದೆ.
ಕೊಡಗಿನಲ್ಲಿ ಮತ್ತೊಂದು ವಾರ ಮಳೆ ಸಾಧ್ಯತೆ: ಜಿಲ್ಲೆಯಲ್ಲೇ ಉಳಿದುಕೊಂಡ ಎನ್ಡಿಆರ್ಎಫ್ ತಂಡ
ಕೊಡಗು ಜಿಲ್ಲೆಯಲ್ಲಿ ಇನ್ನೂ ಒಂದು ವಾರಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆ ಇದೆ. ಹಾಗಾಗಿ ಇನ್ನೂ 15 ದಿನಗಳ ಕಾಲ ಎನ್ಡಿಆರ್ಎಫ್ ತಂಡ ಜಿಲ್ಲೆಯಲ್ಲೇ ಇರಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಈಗಾಗಲೇ ಭಾರೀ ಮಳೆಯಿಂದ ಸಮಸ್ಯೆ ಎದುರಾಗಿದೆ. ಮತ್ತೆ ಮಳೆ ಮುಂದುವರೆದಲ್ಲಿ ಇನ್ನೂ ಸಮಸ್ಯೆ ಎದುರಾಗುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಎನ್ಡಿಆರ್ಎಫ್ ತಂಡವನ್ನು ಜಿಲ್ಲೆಯಲ್ಲಿ ಅಲರ್ಟ್ ಮಾಡಿಟ್ಟುಕೊಳ್ಳಲಾಗಿದೆ. ಮಳೆ ಕಡಿಮೆಯಾದಲ್ಲಿ ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಎನ್ಡಿಆರ್ಎಫ್ ತಂಡ ವಾಪಸ್ ಆಗುತ್ತಿತ್ತು. ಆದರೆ ಮಳೆ ಇನ್ನೂ ಒಂದು ವಾರಗಳ ಕಾಲ ಮುಂದುವರೆಯುವ ಮುನ್ಸೂಚನೆ ಇರುವುದರಿಂದ ಇನ್ನೂ 15 ದಿನಗಳ ಕಾಲ ಎನ್ಡಿಆರ್ಎಫ್ ತಂಡ ಜಿಲ್ಲೆಯಲ್ಲೇ ಇರಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದಲೂ ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿಯುತ್ತಲೇ ಇದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಆತಂಕವಿದೆ. ಆದರೆ ಇದು ಸಾಧಾರಣ ಮಳೆಯಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.