ಕೊಡಗು: ಜಿಲ್ಲೆಯ ಕುಶಾಲನಗರ ತಾಲೂಕಿನ ರಸೂಲ್ಪುರ ಬಾಳುಗೋಡಿನಲ್ಲಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಹತ್ತು ತಿಂಗಳ ಗರ್ಭಿಣಿ ಆನೆಯೊಂದನ್ನು ತಡರಾತ್ರಿ ಕಿಡಿಗೇಡಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಅಂದಾಜು 20 ವರ್ಷದ ಆನೆಯನ್ನು ಶೂಟ್ ಮಾಡಿ ಹತ್ಯೆ ಮಾಡಲಾಗಿದ್ದು, ಸ್ಥಳದಲ್ಲೇ ಒದ್ದಾಡಿ ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೇಬರದ ಮರಣೋತ್ತರ ಪರೀಕ್ಷೆ ನಡೆದಿದ್ದು, ಗರ್ಭದಲ್ಲಿದ್ದ ಮರಿಯಾನೆ ಕೂಡಾ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ರಸೂಲ್ಪುರ, ಬಾಳುಗೋಡು, ದುಬಾರೆ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಆಹಾರ ಅರಸಿ ನಾಡಿಗೆ ಬಂದ ಸಲಗಗಳು ತೋಟಕ್ಕೆ ನುಗ್ಗಿ ದಾಂಧಲೆ ಮಾಡುತ್ತಿವೆ. ರಸ್ತೆಯಲ್ಲಿ ಒಡಾಡುವ ಜನರ ಮೇಲೂ ದಾಳಿ ಮಾಡಿದ ಘಟನೆಗಳು ಜರುಗಿವೆ. ಈ ಭಾಗದಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿರುವುದರಿಂದ ಪ್ರತಿ ರಾತ್ರಿ ಆನೆಗಳು ಕಾಡಿನಿಂದ ನಾಡಿಗೆ ಬರುತ್ತವೆ. ಇದಕ್ಕಾಗಿ ರೈತರು, ಅರಣ್ಯ ಇಲಾಖೆ ಕಾಡಂಚಿನಲ್ಲಿ ಸೋಲಾರ್ ವಿದ್ಯುತ್ ಬೇಲಿಯನ್ನು ನಿರ್ಮಿಸಿದ್ದಾರೆ. ಆದರೆ ಈ ಬೇಲಿ ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಕಾಡಾನೆಗಳು ಸುಲಭವಾಗಿ ರೈತರ ತೋಟ, ಗದ್ದೆಗಳಿಗೆ ನುಗ್ಗುತ್ತಿವೆ. ಹಾಗಾಗಿಯೇ, ರಾತ್ರಿ ಕಾಫಿ ತೋಟಕ್ಕೆ ನುಗ್ಗಿದ ಆನೆಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಆನೆ ಬಲಿಯಾಗಿರುವ ಸ್ಥಳಕ್ಕೆ ಆರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೆಲವು ಕಡೆಗಳಲ್ಲಿ ಮನುಷ್ಯರ ಮೇಲೆ ದಾಳಿ ನಡೆಯುತ್ತಿದೆ. ಇನ್ನೂ ಕೆಲವು ಭಾಗದಲ್ಲಿ ಕಾಡು ಪ್ರಾಣಿಗಳೂ ಪ್ರಾಣ ಕಳೆದುಕೊಳ್ಳುತ್ತಿವೆ.
ಇದನ್ನೂ ಓದಿ :ಬಾಯಾರಿಕೆ.. ದೇವಸ್ಥಾನದಲ್ಲಿ ಕೈ ಪಂಪ್ ಒತ್ತಿ ನೀರು ಕುಡಿದ ಕಾಡಾನೆ: ವೈರಲ್ ವಿಡಿಯೋ