ಕಲಬುರಗಿ :ಸಚಿವ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲ್ಲೇ ಕಲಬುರಗಿಯಲ್ಲೂ ಅಂತಹದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಪರ್ಮನೆಂಟ್ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ಆಕೆಯ ಬೆತ್ತಲೆ ವಿಡಿಯೋ ಹಾಕಿಸಿಕೊಂಡು ಮಾನ ಹಾನಿ ಮಾಡಲಾಗಿದೆ ಎಂದು ಆರೋಪಿಸಿ, ಇದೀಗ ಸಂತ್ರಸ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕಲಬುರ್ಗಿ ವಿಶ್ವವಿದ್ಯಾಲಯ ಗ್ರಂಥಾಲಯದ ಅಧೀಕ್ಷಕ ಆರೋಪಿ ಶರಣಪ್ಪ ಮಾಕುಂಡಿ, ಮಹಿಳೆಗೆ ಆಮಿಷ ತೋರಿಸಿ ಅಶ್ಲೀಲ ವಿಡಿಯೋಗೆ ಬೇಡಿಕೆ ಇಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸಂತ್ರಸ್ತೆ ವಿವಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಸಂತ್ರಸ್ತೆ ಕಲಬುರ್ಗಿ ವಿವಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. 'ನಿನ್ನ ಬೆತ್ತಲೆ ವಿಡಿಯೋ ತೋರಿಸು, ನಿನಗೆ ಪರ್ಮನೆಂಟ್ ಕೆಲಸ ಕೊಡಿಸುತ್ತೇನೆ' ಎಂದು ಗ್ರಂಥಾಲಯ ಅಧೀಕ್ಷಕ ಶರಣಪ್ಪ ಸಂತ್ರಸ್ತೆಗೆ ಹೇಳಿದ್ದಾನಂತೆ. ಅದರಂತೆ ಸಂತ್ರಸ್ತೆ ತನ್ನ ಮೊಬೈಲ್‌ನಲ್ಲಿ ತನ್ನ ಬೆತ್ತಲೆ ಫೋಟೊ ಹಾಗೂ ವಿಡಿಯೋ ಮಾಡಿ ಆರೋಪಿ ಮೊಬೈಲ್ಗೆ ಕಳಿಸಿದ್ದಾರೆ ಎನ್ನಲಾಗಿದೆ.
ನಂತರ ಆರೋಪಿ ಈ ವಿಡಿಯೋವನ್ನು ಬೇರೆ ವಾಟ್ಸ್ಆ್ಯಪ್ ಗ್ರೂಪ್‌ಗೆ ಶೇರ್ ಮಾಡಿದ್ದು, ಇದರಿಂದ ನೊಂದಿರುವ ಮಹಿಳೆ ಇದೀಗ ವಿವಿ ಪೊಲೀಸ್ ಠಾಣೆಯಲ್ಲಿ ಶರಣಪ್ಪ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಲಬುರ್ಗಿ ವಿವಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 292, 417, 420, 354 (ಎ)ಅಡಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.