ಕರ್ನಾಟಕ

karnataka

ETV Bharat / state

ಅಂಬೇಡ್ಕರ್ ಪ್ರತಿಮೆ ಧ್ವಂಸ ಮಾಡಿದವರೇ ಈಗ ಜೈಭೀಮ್ ಅಂತಾರೆ: ಅಂಬೇಡ್ಕರ್ ಮರಿ ಮೊಮ್ಮಗ ಉವಾಚ - kalburgi

ಈ ಹಿಂದೆ ಯಾರು ಬಾಬಾ ಸಾಹೇಬ ಅಂಬೇಡ್ಕರ್ ಅವರು ಪ್ರತಿಮೆ ಧ್ವಂಸ ಮಾಡಿದ್ದರೋ ಅವರೇ ಇಂದು ಜೈ ಭೀಮ್ ಎಂಬ ಘೋಷಣೆ ಕೂಗುತ್ತಿದ್ದಾರೆ ಎಂದು ರಾಜ್‌ರತ್ನ ಅಂಬೇಡ್ಕರ್‌ ಹೇಳಿದರು.

ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜ್ ರತ್ನ ಅಂಬೇಡ್ಕರ್

By

Published : Apr 28, 2019, 9:55 PM IST

ಕಲಬುರಗಿ :ಸಂವಿಧಾನ ಶಿಲ್ಪಿ ಡಾ.‌ಬಿ ಆರ್‌ ಅಂಬೇಡ್ಕರ್‌ ಅವರ 128ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಜಿಲ್ಲೆಯ ವಾಡಿ‌ ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ 74ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜ್ ರತ್ನ ಅಂಬೇಡ್ಕರ್ ಅವರು ಉದ್ಘಾಟಿಸಿ ಮಾತನಾಡಿದರು. ಈ‌ ದೇಶದಲ್ಲಿ ಚುನಾವಣೆ ನಡೆಯುತ್ತಿರುವುದು ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಡುವೆ ಅಲ್ಲ, ಸಂವಿಧಾನ ಮತ್ತು‌ ಮನುಸ್ಮೃತಿ ನಡುವೆ. ಬಿಜೆಪಿಯ ಸಂಸದರು ನಾವು ಬಂದಿರುವುದೇ ಸಂವಿಧಾನ ಬದಲಾವಣೆ ಮಾಡೋದಕ್ಕೆ ಎನ್ನುತ್ತಾರೆ. ಇಂತವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕಿಡಿಕಾರಿದರು.

ಯಾರು ಬಾಬಾ ಸಾಹೇಬ ಅಂಬೇಡ್ಕರ್ ಅವರು ಪ್ರತಿಮೆ ಧ್ವಂಸ ಮಾಡಿದ್ದರೋ ಅವರೇ ಇಂದು ಜೈಭೀಮ್ ಎಂಬ ಘೋಷಣೆ ಕೂಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಫಾಯಿ‌ ಕರ್ಮಚಾರಿಗಳ ಪಾದ ತೊಳೆಯುವ ನಾಟಕವಾಡುತ್ತಿದ್ದಾರೆ. ಇದೆಲ್ಲ ಸಾಧ್ಯವಾದದ್ದು ಅಂಬೇಡ್ಕರ್ ಸಾಹೇಬ್ರು ನಮಗೆ ಕೊಟ್ಟ ಮತದಾನ ಹಕ್ಕಿನಿಂದ. ಆದರೆ, ಈಗಿನವರು ಸೀರೆ, ಹೆಂಡಕ್ಕೆ ದುಡ್ಡಿಗೆ ತಮ್ಮ ಮತ ಮಾರಿಕೊಂಡು ಅಂಬೇಡ್ಕರ್ ಅವರಿಗೆ ಮೋಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಮೆಂಟ್ ನಗರಿ ವಾಡಿ ಮತ್ತು ಅಂಬೇಡ್ಕರ್ ಮಧ್ಯೆದ ಸಂಬಂಧ:

ಪ್ರತಿ ಅಂಬೇಡ್ಕರ್ ಅವರ ಜಯಂತ್ಯುತ್ಸವಕ್ಕೆ ಶೃಂಗಾರಗೊಳ್ಳುವ ವಾಡಿ ಪಟ್ಟಣಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಪಾದ ಸ್ಪರ್ಶಿಸಿದ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ನಿಜಾಮ್ ಸರಕಾರದ ಆಹ್ವಾನದ ಮೇರೆಗೆ 1945 ಏಪ್ರಿಲ್ 27ರಂದು ವಾಡಿ ಪಟ್ಟಣದ ಮಾರ್ಗವಾಗಿ ಹೈದರಾಬಾದ್‌ಗೆ ತೆರಳುವಾಗ, ವಾಡಿ ಪಟ್ಟಣಕ್ಕೆ ವಿಶ್ವಕಂಡ ಮಹಾನ್ ನಾಯಕ ಮೊದಲ ಬಾರಿ ಭೇಟಿ ನೀಡಿದರು. ಮತ್ತೆ 2ನೇ ಭಾರಿ 1952ರಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡನೆ ನಿಮಿತ್ತ ಹೈದರಾಬಾದ್‌ಗೆ ಹೊರಡುವ ಸಮಯದಲ್ಲಿ ಭೇಟಿ‌ ನೀಡಿದರ ಹಿನ್ನೆಲೆ ವಾಡಿ ಪಟ್ಟಣದಲ್ಲಿ ಪ್ರತಿ ವರ್ಷ ಏಪ್ರಿಲ್ 27ಮತ್ತು 28ರಂದು 'ಅಂಬೇಡ್ಕರ್ ಹಬ್ಬ' ಎಂದೇ ಆಚರಿಸಲಾಗುತ್ತದೆ.

ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಿ ಕುಟುಂಬದವರೆಲ್ಲ ಒಂದೆಡೆ ಸೇರಿ ಸಂಭ್ರಮದಿಂದ ಜಯಂತಿಯನ್ನು ಆಚರಿಸುತ್ತಾರೆ. ಅಲ್ಲದೆ ಅಂಬೇಡ್ಕರ್ ವಾಡಿಗೆ ಬಂದಾಗ ಅವರ ಕುಳಿತಿರುವ ಜಾಗದಲ್ಲಿ ಬೃಹತ್ ಪ್ರತಿಮೆ ಕೊಡ ಸ್ಥಾಪಿಸಲಾಗಿದೆ. ಇದು ವಾಡಿ ಪಟ್ಟಣದಲ್ಲಿ ಅಂಬೇಡ್ಕರ್ ಅವರ ಸತತ 74ನೇ ಜಯಂತಿ ಆಗಿದ್ದು ಈ ವರ್ಷವೂ ಸಹ ಅಂಬೇಡ್ಕರ್ ಅವರ ಮರಿ‌ಮೊಮ್ಮಗ ಜಯಂತ್ಯುತ್ಸವಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಬೌದ್ಧ ಬಿಕ್ಷು ಭಂತೆ ಬುದ್ದರತ್ನ, ಸಾಹಿತಿ ಎಚ್.ಎಸ್ ಅನುಪಮಾ. ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷರಾದ ಪಿ.ಮೂರ್ತಿ, ವಾಡಿ ಬೌದ್ಧ ಸಮಾಜದ ಮುಖಂಡರಾದ ಚಂದ್ರಸೇನ ಮೆನಗಾರ್, ಭಂತೆ ಜ್ಞಾನ ಸಾಗರ್, ಆಂಧ್ರ ಅನಾಲಿಯೋ, ನವಬೌದ್ಧ ಸಮಾಜದ ಅಧ್ಯಕ್ಷರಾದ ಟೊಪ್ಪಣ್ಣಾ ಕೊಮಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಹೆಬೂಬ್ ಸಾಹೇಬ್, ಜಯಂತಿ‌ ಕಮಿಟಿ ಅಧ್ಯಕ್ಷ ಸಂದೀಪ್ ಕಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರಾವಣಕುಮಾರ್ ಮೊಸಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ABOUT THE AUTHOR

...view details