ಕಲಬುರಗಿ: ಜೋಳ ಬಿತ್ತನೆಗೆಂದು ಜಮೀನಿಗೆ ಹೋಗುವಾಗ ಮಿನಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಬಾಲಕ ಸೇರಿ ಇಬ್ಬರು ಮೃತಪಟ್ಟಿರುವ ದುರ್ಘಟನೆ ಆಳಂದ ತಾಲೂಕಿನ ಮೋಘಾ ಕೆ. ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಮಿನಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಪ್ರಕಾಶ ಬನಸೋಡೆ (32) ಹಾಗೂ ವಿನೋದ ಜಮಾದಾರ (12) ಮೃತರು. ಗ್ರಾಮದ ಹೊರವಲಯದಲ್ಲಿರುವ ಜಮೀನನ್ನು ಲೀಸ್ಗೆ ಪಡೆದಿದ್ದ ಪ್ರಕಾಶ್, ಜೋಳ ಬಿತ್ತಲು ಮಿನಿ ಟ್ರಾಕ್ಟರ್ನಲ್ಲಿ ಹೋಗುತ್ತಿದ್ದರು. ಈ ವೇಳೆ ತನ್ನ ತಂದೆಗೆ ಊಟ ಕೊಡಲು ಹೊರಟಿದ್ದ ಬಾಲಕ ವಿನೋದ ಮಾರ್ಗಮಧ್ಯೆ ಟ್ರ್ಯಾಕ್ಟರ್ ಹತ್ತಿದ್ದಾನೆ. ಜಮೀನಿನ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ.