ಸೇಡಂ(ಕಲಬುರಗಿ):ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಭೇಟಿ ನೀಡಿ ಪರಿಶೀಲಿಸಿದರು.
ಪ್ರವಾಹಪೀಡಿತ ಗ್ರಾಮಗಳಿಗೆ ತಹಶೀಲ್ದಾರ್ ಭೇಟಿ ತಾಲೂಕಿನ ಹಂಗನಹಳ್ಳಿ, ಸಂಗಾವಿ (ಟಿ) ಸೇರಿ ವಿವಿಧ ಗ್ರಾಮಗಳಿಗೆ ತೆರಳಿದ ಅವರು, ನೆಲಕ್ಕುರುಳಿದ ಮನೆಗಳು, ಪಶು-ಪ್ರಾಣಿಗಳ ಮರಣ, ದವಸ-ಧಾನ್ಯಗಳ ಮತ್ತು ಬೆಳೆಹಾನಿ ಹಾನಿಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಳಖೇಡ ಬ್ರಿಡ್ಜ್ಗ ಭೇಟಿ ನೀಡಿ ಪರಿಶೀಲಿಸಿ, ಪಿಎಸ್ಐ ಶಿವಶಂಕರ ಬಳಿ ನೀರಿನ ಮಟ್ಟದ ಬಗ್ಗೆ ಮಾಹಿತಿ ಪಡೆದರು.
ಬಳಿಕ ಕೆಆರ್ಡಿಸಿಎಲ್ ಇಲಾಖೆಯ ಇಇ ಅವರರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ಬ್ರಿಡ್ಜ್ ಫಿಟ್ನೆಸ್ ಪ್ರಮಾಣ ಪತ್ರ ನೀಡುವಂತೆ ಸೂಚಿಸಿದರು. ಬ್ರಿಡ್ಜ್ ಫಿಟ್ನೆಸ್ ಪ್ರಮಾಣ ಪತ್ರ ಪರಿಶೀಲಿಸಿದ ನಂತರವೇ ವಾಹನ ಸಂಚಾರಕ್ಕೆ ಅನುಮತಿ ನೀಡಲು ಪಿಎಸ್ಐ ಶಿವಶಂಕರ ಅವರಿಗೆ ಸೂಚಿಸಿದರು.
ಸೇಡಂ ಪಟ್ಟಣದ ಸಮೀಪದ ವಿಶ್ವಜ್ಯೋತಿ ವಿದ್ಯಾಮಂದಿರ ಶಾಲೆ ಪ್ರತಿವರ್ಷ ಜಲಕಂಟಕ ಎದುರಿಸುತ್ತಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೆಲಮಹಡಿಯಲ್ಲಿ ಐದಾರು ಅಡಿ ನೀರು ಜಮಾವಣೆಯಾಗಿದೆ. ನೀರು ಹೊರ ಹಾಕಲಾಗದೇ ಸಿಬ್ಬಂದಿ ನಿತ್ಯ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ನೀರು ತುಂಬಿದ ಪರಿಣಾಮ ಸಾವಿರಾರು ರೂ. ಮೌಲ್ಯದ ಪಠ್ಯಪುಸ್ತಕ, ಕಂಪ್ಯೂಟರ್ ಜಲಾವೃತವಾಗಿವೆ. ನೀರು ಹೊರ ಹಾಕಲು ತಾಲೂಕು ಆಡಳಿತ ಸಹಕರಿಸಬೇಕೆಂದು ಸಂಸ್ಥೆ ಅಧ್ಯಕ್ಷ ವಿಜಯಕುಮಾರ್ ಸೂರವಾರ ಮೊರೆ ಇಟ್ಟಿದ್ದಾರೆ.