ಕಲಬುರಗಿ :ಇಲ್ಲಿನ ಅಶೋಕ ನಗರ ಪೊಲೀಸ್ ಠಾಣೆಯ ವಶದಲ್ಲಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ. ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿಯೆದುರು ಮೃತದೇಹವಿಟ್ಟು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಮೃತನ ಹೆಸರು ಉದಯ್ ಪಾರ್ದಿ (55) ಎಂದು ತಿಳಿದುಬಂದಿದೆ. ಕಲಬುರಗಿ ತಾಲೂಕಿನ ಮಡ್ಡಿ ಸಿರಸಗಿ ಗ್ರಾಮದ ಮೂಲದವನಾದ ಉದಯ್ ಪಾರ್ದಿ, ಅನಾರೋಗ್ಯ ಹಿನ್ನೆಲೆಯಲ್ಲಿ ಮನೆಯಲ್ಲಿ ಇರುತ್ತಿದ್ದ. ಆದರೆ, ಕೆಲ ದಿನಗಳ ಹಿಂದೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವೊಂದರಲ್ಲಿ ಓರ್ವ ಆರೋಪಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿತ್ತು. ಕಳ್ಳತನವಾಗಿದ್ದ ಮನೆಯಲ್ಲಿ ಫಿಂಗರ್ ಪ್ರಿಂಟ್ ಪರಿಶೀಲನೆ ವೇಳೆ ಮಡ್ಡಿ ಸಿರಸಗಿ ಗ್ರಾಮದ ಉದಯ್ ಪಾರ್ದಿ ಫಿಂಗರ್ ಪ್ರಿಂಟ್ಗೆ ಹೋಲಿಕೆಯಾಗಿತ್ತು.
ಹೀಗಾಗಿ, ಉದಯ್ನನ್ನು ಮಡ್ಡಿ ಸಿರಸಗಿ ಗ್ರಾಮದಲ್ಲಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭಯದಿಂದ ಕೆಳಗೆ ಕುಸಿದು ಬಿದ್ದ ಉದಯ್ನನ್ನು ತಕ್ಷಣವೇ ಪೊಲೀಸರು ನಗರದ ಜಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ತದನಂತರ ಮೃತಪಟ್ಟಿದ್ದಾನೆಂದು ವೈದ್ಯರು ಹೇಳಿದ್ದಾರೆ. ಆದರೆ, ಪ್ರಕರಣ ತಿರುವು ಪಡೆದುಕೊಂಡಿದ್ದು, ಅಶೋಕ ನಗರ ಠಾಣೆ ಪೊಲೀಸರೇ ಯಾವುದೇ ತಪ್ಪು ಮಾಡದ ಉದಯ್ನನ್ನು ಕರೆದುಕೊಂಡು ಹೋಗಿ ವಿಚಾರಣೆ ನೆಪದಲ್ಲಿ ಹೊಡೆದು ಸಾಯಿಸಿದ್ದಾರೆ ಅಂತ ಮೃತ ಉದಯ್ನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಉದಯ್ ಕೆಲ ದಿನಗಳಿಂದ ಕಳ್ಳತನ ಮಾಡುವುದನ್ನು ಬಿಟ್ಟು ಮನೆಯಲ್ಲೇ ಇರುತ್ತಿದ್ದ. ಹೀಗಾಗಿ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ವಸ್ತುಗಳನ್ನು ಕಳ್ಳರಿಂದ ತಾನೇ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.