ಕಲಬುರಗಿ:ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ದಾಳಿಯೇ ನಡೆದಿಲ್ಲ, ಕಾರು ಅಪಘಾತದಲ್ಲಿ ಗಾಯಗೊಂಡು ಸುಖಾಸುಮ್ಮನೆ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಸ್ಪಷ್ಟೀಕರಣ ನೀಡಿದ್ದಾರೆ.
"ಮಣಿಕಂಠ ರಾಠೋಡ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಮಾಡಿದಾಗ ಅವರ ಮೇಲೆ ಹಲ್ಲೆಯಾಗಿರಲಿಲ್ಲ, ಅದೊಂದು ಅಪಘಾತ ಪ್ರಕರಣವೆಂದು ತನಿಖೆಯಲ್ಲಿ ಬಯಲಾಗಿದೆ. ಸಾಕ್ಷಿದಾರರ ಹೇಳಿಕೆ ಹಾಗೂ ಪೊಲೀಸ್ ತನಿಖೆಯಲ್ಲಿ ಅಪಘಾತವಾಗಿರುವುದು ಗೊತ್ತಾಗಿದೆ. ಯಾದಗಿರಿ ಜಿಲ್ಲೆಯ ಗುರಮಠಕಲ್ ಹತ್ತಿರದ ಚೆಪೆಟ್ಲಾದಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ನ್ಯಾಯಾಧೀಶರ ಮುಂದೆ ಸಾಕ್ಷಿದಾರರ ಹೇಳಿಕೆಯನ್ನು ಪಡೆಯಲಾಗಿದೆ. ಅಪಘಾತವಾದ ಕಾರನ್ನು ಹೈದರಾಬಾದ್ನ ಶೋ ರೂಮ್ವೊಂದರಲ್ಲಿ ಬಿಟ್ಟಿರುವುದು ಪತ್ತೆಯಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಣಿಕಂಠ ರಾಠೋಡ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವೆ : ಇನ್ನು ಈ ಕುರಿತು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ''ಬಿಜೆಪಿ ಪಕ್ಷದ ಮಣಿಕಂಠ ರಾಠೋಡ ಮೇಲಿನ ಹಲ್ಲೆ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅವರು ದೂರು ನೀಡಿರುವಂತೆ ಶಂಕರವಾಡಿ ಬಳಿ ಅವರ ಮೇಲೆ ಯಾವುದೇ ಹಲ್ಲೆಯಾಗಿಲ್ಲ. ಬದಲಿಗೆ ಮಣಿಕಂಠ ಹಾಗೂ ಅವರ ಸ್ನೇಹಿತರು ಪ್ರಯಾಣಿಸುತ್ತಿದ್ದ ವಾಹನ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚೆಪೆಟ್ಲಾ ಬಳಿ ಅಪಘಾತಕ್ಕೀಡಾಗಿದೆ. ಆ ಸಂದರ್ಭದಲ್ಲಿ ಅವರಿಗೆ ಗಾಯಗಳಾಗಿವೆ, ಇದು ತನಿಖೆಯ ವೇಳೆ ಸಾಕ್ಷಿಗಳ ಹೇಳಿಕೆಯಿಂದ ತಿಳಿದು ಬಂದಿದೆ ಅಂತಾ ಎಸ್ ಪಿ ಅಡ್ಡೂರು ಶ್ರೀನಿವಾಸಲು ಸ್ಪಷ್ಟಪಡಿಸಿದ್ದಾರೆ. ನನ್ನ ಮೇಲೆ ನಿರಾಧಾರ ಆರೋಪ ಮಾಡಿ ಚಾರಿತ್ರ್ಯ ಹರಣ ಮಾಡಿದ ಬಿಜೆಪಿಯ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸುವೆ. ಮಣಿಕಂಠ ರಾಠೋಡ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವೆ'' ಎಂದು ಹೇಳಿದರು.