ಕರ್ನಾಟಕ

karnataka

By

Published : Nov 10, 2020, 9:36 PM IST

ETV Bharat / state

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಅರಳಿದ ಕಮಲ.. ನಾಲ್ಕನೆ ಬಾರಿ ಪರಿಷತ್‌ಗೆ ಶಶೀಲ್ ನಮೋಶಿ

ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ 9,418 ಮತಗಳನ್ನು ಪಡೆಯುವ ಮೂಲಕ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ..

Shashil Namoshi win
ಶಶೀಲ್ ನಮೋಶಿ ಭರ್ಜರಿ ಜಯ

ಕಲಬುರಗಿ :ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಶಶೀಲ್ ನಮೋಶಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರಿಗಿಂತ 3,130 ಮತಗಳ ಅಂತರದಿಂದ ನಮೋಶಿ ಗೆಲುವಿನ ನಗೆ ಬಿರಿದ್ದಾರೆ.

ಪ್ರಥಮ ಪ್ರಾಶಸ್ತ್ಯದಲ್ಲಿ ಅಭ್ಯರ್ಥಿ ಗೆಲ್ಲದ ಕಾರಣ ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆ ಮಾಡಬೇಕಾಯಿತು. ಎರಡನೇ ಪ್ರಾಶಸ್ತ್ಯ ಮತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಟ್ಟೂರ 7,082 ಮತ ಪಡೆದು ಸೋಲೊಪ್ಪಿಕೊಂಡಿದ್ದಾರೆ. 10,212 ಮತ ಪಡೆದು ನಮೋಶಿ ಗೆಲುವು ಸಾಧಿಸಿದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಅರಳಿದ ಕಮಲ : ಶಶೀಲ್ ನಮೋಶಿ ಭರ್ಜರಿ ಜಯ

ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡಿತ್ತು. ಒಟ್ಟು 21,437 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ ಅಸಿಂಧುಗೊಂಡು 1,844 ಮತಗಳು ತಿರಸ್ಕೃತಗೊಂಡಿದ್ದವು. ಒಟ್ಟು ಮಾನ್ಯತೆ ಪಡೆದ ಮತಗಳು 19,593 ಮತಗಳಾಗಿದ್ದವು‌. ಇದರಲ್ಲಿ ಶೇ.50ಮೇಲ್ಪಟ್ಟು ಅಂದ್ರೆ 9,797 ಮತ ಪಡೆದರೆ ಪ್ರಥಮ ಪ್ರಾಶಸ್ತ್ಯ ಮತಗಳಲ್ಲಿ ಜಯ ಸಾಧಿಸಬಹುದಾಗಿತ್ತು.

ಆದ್ರೆ, ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ ಪಡೆದ ಮತಗಳು 9,418 ಪಡೆದಿದ್ದರು. ಹೀಗಾಗಿ, ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಬೇಕಾಯ್ತು. ಕೊನೆಯ ಮೂರು ಅಭ್ಯರ್ಥಿಗಳಾದ ವಾಟಾಳ್ ನಾಗರಾಜ, ಚಂದ್ರಶೇಖರ್ ಹಾಗೂ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರನ್ನು ಎಲಿಮಿನೇಟ್ ಮಾಡಿ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ಮಾಡಿದಾಗ ಬಿಜೆಪಿ ಗೆಲುವು ಸಾಧಿಸಿದೆ.

ಬಿಜೆಪಿ ಕಾರ್ಯಕರ್ತರ ಸಂಭ್ರಮ :ನಮೋಶಿ ಗೆಲುವು ಖಚಿತವಾಗುತ್ತಿದ್ದಂತೆ ನಮೋಶಿ ಪರ ಕಾರ್ಯಕರ್ತರು ಬೆಂಬಲಿಗರು ಘೋಷಣೆ ಕೂಗಿ ಸಂಭ್ರಮಿಸಿದರು. ಇದೇ ವೇಳೆ ತಮ್ಮ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ ನಮೋಶಿ, ನಾಲ್ಕನೆಯ ಬಾರಿಗೆ ಶಿಕ್ಷಕರು ಆಶೀರ್ವದಿಸಿದ್ದಾರೆ.

ಬಿಜೆಪಿ ಸರ್ಕಾರದ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ್ದಾರೆ. ಶಿಕ್ಷಕರಿಗೆ ಆಭಾರಿಯಾಗಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ, ಅವರ ಸಮಸ್ಯೆಗಳ ಪರ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ABOUT THE AUTHOR

...view details