ಕಲಬುರಗಿ :ಕೊರೊನಾ ಗೆದ್ದು ಬಂದವರಿಗೆ ಶಾರೀರಿಕ ಹಾಗೂ ಮಾನಸಿಕ ಆತ್ಮಸ್ಥೈರ್ಯ ತುಂಬಲು ವಿನೂತನ ಪ್ರಯೋಗಕ್ಕೆ ಕಲಬುರಗಿ ಜಿಲ್ಲಾಡಳಿತ ಮುಂದಾಗಿದೆ.
ನಗರದ ರಾಮಮಂದಿರ ರಿಂಗ್ ರಸ್ತೆಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಲ್ಯಾಣ ಮಂಟಪದಲ್ಲಿ ಪುನಶ್ಚೇತನ ಅಭಿಯಾನ ಕೇಂದ್ರ ತೆರೆಯುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊರೊನಾ ಗೆದ್ದು ಬಂದವರಿಗೆ ಧೈರ್ಯ ತುಂಬುವ ಹೊಸ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಶ್ರೀ ರವಿಶಂಕರ್ ಗುರೂಜಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಪುನಶ್ಚೇತನ ಅಭಿಯಾನ ಕೇಂದ್ರ ತೆರೆಯಲಾಗಿದ್ದು, ಖಾಸಗಿ- ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖರಾದವರು ಪಾಲ್ಗೊಳ್ಳಬಹುದಾಗಿದೆ.
ಇದು ಸಂಪೂರ್ಣ ಉಚಿತವಾಗಿದ್ದು, ಕ್ಲಿನಿಕಲ್ ಸೈಕಾಲಜಿಸ್ಟ್, ಡಯಟಿಶಿಯನ್, ಫಿಸಿಯೋಥೆರೆಪಿಸ್ಟ್, ಯೋಗ ಗುರುಗಳು, ಪ್ರಾಣಾಯಾಮ, ಡ್ಯಾನ್ಸ್, ಧ್ಯಾನ, ಶ್ವಾಸಕೋಶ ಇಮ್ಮಡಿಗೊಳಿಸುವ ತರಬೇತಿದಾರರು ಸೇರಿದಂತೆ ಇನ್ನಿತರ ಚಟುವಟಿಕೆಗಳು ಪರಿಣಿತರು ಇಲ್ಲಿ ತರಬೇತಿ ನೀಡಲಿದ್ದಾರೆ.
ರೋಗಿಗಳಿಗೆ ಮನೋಬಲ, ಉತ್ಸಾಹ ಹಾಗೂ ದೈಹಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಪರಿಣಿತರ ತಂಡ ಪ್ರಯತ್ನಿಸಲಿದೆ. ಕೊರೊನಾ ಸೋಂಕಿನಿಂದ ನರಳಾಡಿ ಕುಗ್ಗಿದವರ ಪಾಲಿಗೆ ಇದು ಜೀವಾಮೃತವಾಗಲಿದೆ.