ಕರ್ನಾಟಕ

karnataka

ETV Bharat / state

ಕಲಬುರಗಿ ರೈಲ್ವೆ ನಿಲ್ದಾಣ : ಎನ್​ಡಿಆರ್​ಎಫ್ ತಂಡದಿಂದ ರೈಲ್ವೆ ಅಪಘಾತ ಅಣಕು ಪ್ರದರ್ಶನ - ಈಟಿವಿ ಭಾರತ್​ ಕನ್ನಡ ನ್ಯೂಸ್​

ರೈಲ್ವೆ ಅಪಘಾತ ಸಂಭವಿಸಿದ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಲಾಯಿತು.

ರೈಲ್ವೆ ಅಪಘಾತ ಅನುಕು‌‌ ಪ್ರದರ್ಶನ
ರೈಲ್ವೆ ಅಪಘಾತ ಅನುಕು‌‌ ಪ್ರದರ್ಶನ

By

Published : May 26, 2023, 7:37 PM IST

ಕಲಬುರಗಿ : ರೈಲು ಅಪಘಾತ ಸಂಭವಿಸಿದಾಗ ಹೇಗೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಅಪಾಯದಿಂದ ಪಾರಾಗಬೇಕು ಎಂದು ಎನ್​ಡಿಆರ್​ಎಫ್ ತಂಡ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಅಣಕು ಪ್ರದರ್ಶನ ಮಾಡಿ ಪ್ರದರ್ಶಿಸಿತು. ಇಂದು ಬೆಳಗ್ಗೆ ಕಲಬುರಗಿ ರೈಲು ನಿಲ್ದಾಣ ಮಾರ್ಗವಾಗಿ ಮುಂಬೈಗೆ ಹೊರಟಿದ್ದ 11302 ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಿಂದ ಬೇರ್ಪಟ್ಟು ರೈಲ್ವೆ ಹಳಿ ಮೇಲೆ ನಿಂತಿದ್ದ ಪ್ರಯಾಣಿಕರಿದ್ದ ಬೋಗಿಯೊಂದಕ್ಕೆ ರೈಲ್ವೆ ಹಳಿ ಸೆಂಟ್ರಿಂಗ್ ಸಿಬ್ಬಂದಿ ಇದ್ದ ಬೋಗಿ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರಿದ್ದ ಬೋಗಿಗೆ ಬೆಂಕಿ ಹೊತ್ತಿಕೊಂಡಿತ್ತು.

ಈ ಘಟನೆಯಲ್ಲಿ 8 ಮಂದಿಗೆ ಗಾಯವಾಗಿದ್ದು, ಒಬ್ಬ ಮಹಿಳೆ ಸೇರಿದಂತೆ ಪುರುಷ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ರೈಲ್ವೆ ಅಪಘಾತವಾದ ಸಂದರ್ಭದಲ್ಲಿ ಎನ್​ಡಿಆರ್​ಎಫ್, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್, ರೈಲ್ವೆ ಸಿಬ್ಬಂದಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಲು ಆಯೋಜಿಸಿದ ರೈಲ್ವೆ ಅಪಘಾತದ ಅಣಕು ಪ್ರದರ್ಶನದ ದೃಶ್ಯಗಳ ಭಾಗವಾಗಿ ಸೋಲಾಪುರ ವಿಭಾಗೀಯ ರೈಲ್ವೆ ಇಲಾಖೆಯಿಂದ ಕಲಬುರಗಿ ರೈಲು ನಿಲ್ದಾಣದ ಆವರಣದಲ್ಲಿ ಸೃಷ್ಟಿಸಿದ ಅಣಕು ಪ್ರದರ್ಶನದ ದೃಶ್ಯಗಳು ಇದಾಗಿದೆ. ರೈಲು ಚಾಲಕನ ನಿಷ್ಕಾಳಜಿಯಿಂದಲೇ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.

ರೈಲಿಗೆ ಬೆಂಕಿ ಹತ್ತಿದ ವಿಷಯ ತಿಳಿಯುತ್ತಲೇ ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಪಡೆ ಬೆಂಕಿ ನಂದಿಸಿದೆ. ಪರಿಹಾರ ಕಾರ್ಯಕ್ಕೆ ತೆಲಂಗಾಣದ ಅಸಿಸ್ಟೆಂಟ್ ಕಮಾಂಡರ್ ದಾಮೋದರ್ ಸಿಂಗ್ ನೇತೃತ್ವದ 20 ಜನ ಸೇನಾ ಸಿಬ್ಬಂದಿ ಒಳಗೊಂಡ ಎನ್​ಡಿಆರ್​ಎಫ್ ತಂಡ ಧಾವಿಸಿ ರೈಲಿನಲ್ಲಿದ್ದ ಪ್ರಯಾಣಿಕರನ್ನು ಹೊರತೆಗೆದರು. ಈ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿಯೇ ತಾತ್ಕಾಲಿಕ ಪರಿಹಾರ ಕೇಂದ್ರವನ್ನೂ ತೆರೆಯಲಾಗಿತ್ತು. ಅಲ್ಲಿಯೇ ವೈದ್ಯಕೀಯ ತಂಡ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿತು.

ನಂತರ ಸಣ್ಣ ಪ್ರಮಾಣ ಗಾಯಗಳಾದ ಐದು ಜನರನ್ನು ಮತ್ತು ತೀವ್ರ ಗಾಯಗೊಂಡ ಎಂಟು ಜನ ಪುರುಷ ಗಾಯಾಳುಗಳನ್ನು ಕಲಬುರಗಿ ನಗರದ ವಿವಿಧ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಯಿತು. ಈ ರೀತಿಯಾಗಿ ರೈಲ್ವೆ ಅಪಘಾತ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಣಕು ಪ್ರದರ್ಶನ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಅಣಕು ಪ್ರದರ್ಶನದ ರೆಸ್ಕ್ಯೂ (ರಕ್ಷಣಾ) ಕಾರ್ಯಾಚರಣೆಯಲ್ಲಿ ಸೋಲಾಪುರ ಮತ್ತು ವಾಡಿ ಯಿಂದ ವಿಶೇಷ ಪರಿಹಾರ ರೆಸ್ಕ್ಯೂ ರೈಲು ಸಹ ಭಾಗಿಯಾಗಿದ್ದವು.

ಇನ್ನು ಈ ವೇಳೆ ರೈಲ್ವೆ ಪ್ರಯಾಣ ಮಾಡುವಾಗ ಸ್ಫೋಟಕ ವಸ್ತುಗಳಾದ ಸಿಲಿಂಡರ್, ಪೆಟ್ರೋಲ್, ಡೀಸೆಲ್‌, ಸೀಮೆ ಎಣ್ಣೆ, ಪಟಾಕಿ ತೆಗೆದುಕೊಂಡು ಹೋಗಬಾರದು. ಧೂಮಪಾನ ಸಹ ಮಾಡಬಾರದು. ಇದರಿಂದ ಅಪಘಾತ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತೆ ಎಂದು ಮಾಹಿತಿ ನೀಡಲಾಯಿತು. ಅಣಕು ಪ್ರದರ್ಶನದ ಯಶಸ್ಸಿಗೆ ಸಹಕರಿಸಿದ ಕಲಬುರಗಿ ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳಿಗೆ, ಅಗ್ನಿಶಾಮಕ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ರೈಲ್ವೆ ಅಪಘಾತದ ಅಣಕು ಪ್ರದರ್ಶನದಲ್ಲಿ ಭಾಗಿಯಾದವರಿಗೆ ಮತ್ತು ಸಾರ್ವಜನಿಕರಿಗೆ ರೈಲ್ವೆ ಇಲಾಖೆ ಧನ್ಯವಾದ ತಿಳಿಸಿದೆ.

ಅಣಕು ಪ್ರದರ್ಶನದ ವೇಳೆ ಸೋಲಾಪುರ ರೈಲ್ವೆ ವಿಭಾಗದ ಸಹಾಯಕ ವಾಣಿಜ್ಯ ಪ್ರಬಂಧಕಿ ಕಲ್ಪನಾ ಬನ್ಸೋಡೆ, ಮುಖ್ಯ ವೈದ್ಯಕೀಯ ಅಧೀಕ್ಷಕ ರಾಮಕೃಷ್ಣ ಮಾನೆ, ಡಿ.ಎಂ.ಓ. ಡಾ.ರಘುನಂದನ್, ಸರ್ಜನ್ ಡಾ.ರತನ್, ಡಾ.ದೇವಿಲಾಲ್, ಎ.ಡಿ.ಇ.ಎನ್. ಶ್ರವಣ ಲಾಲ್, ಸಹಾಯಕ ಸಂಚಾರ ವ್ಯವಸ್ಥಾಪಕ ಆರ್.ಬಿ.ಸಿಂಗ್, ದಿಲಿಪ್ ಥ್ಯಾಡೆ, ಕಲಬುರಗಿ ರೈಲು ನಿಲ್ದಾಣದ ಮ್ಯಾನೇಜರ್ ಎಸ್.ಆರ್.ಮೋನಿ, ಡಿ.ಎಚ್.ಓ. ಡಾ.ರಾಜಶೇಖರ ಮಾಲಿ ಸೇರಿದಂತೆ ರೈಲ್ವೆ ಇಲಾಖೆಯ ಇನ್ನಿತರ ಅಧಿಕಾರಿಗಳು, ಸ್ಥಳೀಯ ಪೊಲೀಸರು ಇದ್ದರು.

ಇದನ್ನೂ ಓದಿ :ಕಲಬುರಗಿ ಜಿಲ್ಲೆಯಲ್ಲಿ‌ ಅಕ್ರಮಗಳಿಗೆ ಕಡಿವಾಣ ಹಾಕಿ: ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಅಧಿಕಾರಿಗಳಿಗೆ ಖಡಕ್‌ ಸೂಚನೆ

ABOUT THE AUTHOR

...view details