ಸೋಂಕಿತ ಸರಕಾರ ಎಂದು ಬರೆಯಲಾದ ಮಾಸ್ಕ್ ಧರಿಸಿ ಅಧಿವೇಶನದಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದ ಕೆಪಿಸಿಸಿ ವಕ್ತಾರರಾದ ಹಾಗೂ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಅದೇ ಫೋಟೋ ಬಳಸಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಸರಕಾರದ ಒಟ್ಟಾರೆ ವೈಫಲ್ಯವನ್ನು ಟೀಕಿಸಿದ್ದಾರೆ.
"ಅಧಿವೇಶನದಲ್ಲಿ ಸಾಕಷ್ಟು ಮಾತನಾಡಲು ಅನುಮತಿ ನಿರಾಕರಿಸಿದ್ದರಿಂದ ವಿರೋಧ ಪಕ್ಷವಾದ ನಮಗೆ ಈ ರೀತಿ ಮಾಸ್ಕ್ ಧರಿಸಿ ಪ್ರತಿಭಟನೆ ಮಾಡುವ ಮೂಲಕ ನಿಮ್ಮ ಸಂದೇಶವನ್ನು ಆಡಳಿತ ಪಕ್ಷದವರಿಗೆ ತಲುಪಿಸುವುದೇ ಸರಿಯಾದ ಮಾರ್ಗವಾಗಿದೆ" ಎಂದು ಶ್ರೀ ಪ್ರಿಯಾಂಕ್ ಖರ್ಗೆ ಖಾರವಾಗಿ ಟ್ವೀಟ್ ಮಾಡಿದ್ದಾರೆ.
ಸೋಂಕಿತ ಸರಕಾರ ಎಂಬ ಮಾಸ್ಕ್ ಧರಿಸಿ ಗಮನ ಸೆಳೆದ ಪ್ರಿಯಾಂಕ್ ಖರ್ಗೆ ಮುಂದುವರಿದ ಅವರು "ದುರಾದೃಷ್ಟ ಎಂದರೆ, ಮಾಸ್ಕ್ ಧರಿಸಿ ಕೊರೊನಾದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಆದರೆ, ಬಿಜೆಪಿ ಸರಕಾರದ ದುರಾಡಳಿತದಿಂದಲ್ಲ" ಎಂದು ಕುಟುಕಿದ್ದಾರೆ. ಅಲ್ಲದೇ ವೈದ್ಯಕೀಯ ಶಿಕ್ಷಣ ಸಚಿವರಿಗೂ ಕೂಡ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಇಂದು ಇಡೀ ಸರಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಹಸ್ರಾರು ಕೊರೊನಾ ಯೋಧರು ತಮ್ಮ ಜೀವಪಣಕ್ಕಿಟ್ಟು ಅವಿರತ ಶ್ರಮದಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಸುಧಾಕರ್ ಅವರಿಗೆ ಟ್ವೀಟ್ ಮೂಲಕ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ನೀವು ತಟ್ಟೆ ಬಡಿಯಲು ಕೇಳಿದ್ದೀರಿ, ನಾವು ಮಾಡಿದ್ದೆವು. ನೀವು ದೀಪ ಬೆಳಗಿಸಿ ಎಂದಿರಿ, ನಾವು ಬೆಳಗಿಸಿದೆವು. ನೀವು ಮನೆಯಲ್ಲೇ ಇರಿ ಎಂದಿರಿ, ನಾವು ಇದ್ದೆವು. ನೀವು ಹೊರಗೆ ಬನ್ನಿ ಎಂದಿರಿ, ನಾವು ಬಂದೆವು. ನೀವು ಹೇಳಿದ ಎಲ್ಲವನ್ನೂ ನಾವು ಮಾಡಿದೆವು. 21 ದಿನಗಳಲ್ಲಿ ಈ ಯುದ್ದ ಮುಗಿಯಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.