ಕಲಬುರಗಿ: ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ವ್ಯಕ್ತಿಯೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಜನ ನಿಬಿಡ ಪ್ರದೇಶದಲ್ಲಿ ಅಬ್ದುಲ್ ಜಾಫರ್ ಎಂಬಾತ ಎರಡು ಕೈಯಲ್ಲಿ ತಲ್ವಾರ್ ಹಿಡಿದು ಜನರನ್ನ ಹೆದರಿಸುತ್ತಿದ್ದ. ತಡೆಯಲು ಹೋದ ಪೊಲೀಸರ ಮೇಲೆ ತಲ್ವಾರ್ನಿಂದ ದಾಳಿ ಮಾಡಲು ಮುಂದಾದಾಗ ವ್ಯಕ್ತಿಯ ಕಾಲಿಗೆ ಗುಂಡು ಹೊಡೆದು ಮಕಾಡೆ ಮಲಗಿಸಿದ್ದಾರೆ. ಒಂದು ಕೈಯಲ್ಲಿ ತಲವಾರ್ ಮತ್ತೊಂದು ಕೈಯಲ್ಲಿ ಚಾಕು ಹಿಡಿದ ಆರೋಪಿ ಜನರನ್ನು ಹೆದರಿಸುತ್ತಿದ್ದ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಶರಣಾಗು ಎಂದರೂ ಜಗ್ಗದೇ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದ. ಆತ್ಮರಕ್ಷಣೆಗಾಗಿ ಕಿರಾತಕನ ಕಾಲಿಗೆ ಪಿಎಸ್ಐ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.
ಆತ್ಮರಕ್ಷಣೆಗಾಗಿ ಫೈರಿಂಗ್:ಭಾನುವಾರ ರಾತ್ರಿ ಸುಮಾರು 9 ಗಂಟೆ ಹೊತ್ತಿಗೆ ಕಲಬುರಗಿ ನಗರದ ಸೂಪರ್ ಮಾರ್ಕೇಟ್ಗೆ ಏರಿಯಾದ ತರಕಾರಿ ಮಾರ್ಕೇಟ್ ಎದುರುಗಡೆ ಮುಖ್ಯ ರಸ್ತೆಯಲ್ಲಿ ಅಬ್ದುಲ್ ಜಾಫರ್ ಎಂಬಾತ ಒಂದು ಕೈಯಲ್ಲಿ ತಲ್ವಾರ್ ಮತ್ತೊಂದು ಕೈಯಲ್ಲಿ ಚಾಕು ಹಿಡಿದುಕೊಂಡು ನಿರ್ಭಿತಿಯಿಂದ ಓಡಾಡುತ್ತ ಜನರನ್ನ ಹೆದರಿಸುತ್ತಿದ್ದ. ವಿಷಯ ತಿಳಿದು ಚೌಕ ಠಾಣೆ ಪಿಎಸ್ಐ ವಾಹೀದ್ ಕೋತ್ವಾಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ತಲ್ವಾರ್ ಹಿಡಿದು ವ್ಯಾಪಾರಿಗಳು ಹಾಗೂ ಜನರನ್ನ ಹೆದರಿಸುತ್ತಿದ್ದ ಜಾಫರ್ಗೆ ಪೊಲೀಸರು ಶರಣಾಗುವಂತೆ ತಿಳಿಸಿದ್ದಾರೆ. ಆದರೂ ಜಗ್ಗದ ಕಿರಾತಕ ಜಾಫರ್ ಪೊಲೀಸರ ಮೇಲೆಯೇ ತಲ್ವಾರ್ ಬೀಸಿ ದಾಳಿ ಮಾಡಲು ಯತ್ನಿಸಿದ್ದಾನೆ. ಆಗ ಹೆದರಿಸಲು ಪಿಎಸ್ಐ ವಾಹೀದ್ ಕೋತ್ವಾಲ್ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ್ದಾರೆ. ಆಗಲೂ ಜಗ್ಗದಿದ್ದಾಗ ಎಡಗಾಲಿಗೆ ಎರಡು ಸುತ್ತು ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.
ಆಸ್ಪತ್ರೆಗೆ ದಾಖಲು: ಪೊಲೀಸ್ ಗುಂಡೇಟು ತಿಂದು ಗಾಯಗೊಂಡಿದ್ದ ಜಾಫರ್ನನ್ನ ಪೊಲೀಸರು ಕಲಬುರಗಿ ನಗರದ ಜೀಮ್ಸ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಚೇತನ್ ಆರ್, ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಎಸಿಪಿ ದೀಪನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.