ಕಲಬುರಗಿ :ರಾಜ್ಯದ ಮೊದಲ ಸಂಚಾರಿ ಕೋವಿಡ್ ಲಸಿಕಾ ವಾಹನವನ್ನು ಕಲಬುರಗಿಯಲ್ಲಿ ಪ್ರಾರಂಭಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ತಯಾರಿ ನಡೆಸಿದೆ. ಈಗಾಗಲೇ ಲೋಕಾರ್ಪಣೆಗೆ ಎರಡು ಸಂಚಾರಿ ಲಸಿಕಾ ಬಸ್ಗಳು ಸಿದ್ದಗೊಂಡಿವೆ. ಗ್ರಾಮೀಣ ಭಾಗದಲ್ಲಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು. ಗ್ರಾಮೀಣ ಭಾಗ ಹಾಗೂ ತಾಂಡಾಗಳಲ್ಲಿ ವಾಸಿಸುವ ಜನರಿಗಾಗಿಯೇ ಸಂಚಾರಿ ಲಸಿಕಾ ಬಸ್ ಸಿದ್ದಪಡಿಸಲಾಗಿದೆ.
ಸಂಚಾರಿ ಲಸಿಕಾ ವಾಹನ ಜನರ ಮನೆ ಬಾಗಿಲಿಗೆ ಬರಲಿದೆ. ಈ ಬಸ್ಗಳು ಒಟ್ಟು ಮೂರು ವಿಭಾಗಗಳನ್ನು ಹೊಂದಿದ್ದು, ಮೊದಲನೇ ವಿಭಾಗದಲ್ಲಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಎರಡನೇ ವಿಭಾಗದಲ್ಲಿ ಲಸಿಕೆ ಹಾಕುವುದು ಹಾಗೂ ಕೊನೆಯ ವಿಭಾಗದಲ್ಲಿ ಲಸಿಕೆ ಪಡೆದ ನಂತರದ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಕೋರಿಕೆಯಂತೆ ಎರಡು ಬಸ್ಗಳನ್ನು ಈಶಾನ್ಯ ಸಾರಿಗೆ ಸಂಸ್ಥೆ ತಯಾರಿಸಿದೆ.