ಕಲಬುರಗಿ: ಸರ್ಕಾರಿ ಅಂಗನವಾಡಿ ಕೇಂದ್ರಗಳು ಅಂದ್ರೆ ಬಡ ಮಕ್ಕಳ ತಾಣ ಅನ್ನೋರಿಗೆ ಈ ಅಂಗನವಾಡಿ ಅಪವಾದ. ಅಚ್ಚುಕಟ್ಟಾದ ಪುಟ್ಟ ಕಟ್ಟಡ, ಗೋಡೆಗೆ ವರ್ಣರಂಜಿತ ಬಣ್ಣ, ಆಕರ್ಷಕ ಪ್ರಾಣಿ, ಪಕ್ಷಿ, ಚೋಟಾ ಭೀಮ್ ನಂತಹ ಮನಮೊಹಕ ಚಿತ್ರಗಳು, ನೀಟಾಗಿ ಸಮವಸ್ತ್ರ ತೊಟ್ಟು ಖುಷಿಯಿಂದ ಹಾಜರಾಗುವ ಮಕ್ಕಳನ್ನು ನೋಡಿದರೆ ಈ ಹೈಟೆಕ್ ಅಂಗನವಾಡಿ ಕೇಂದ್ರ ಖಾಸಗಿ ಕಾನ್ವೆಂಟ್‌ಗೆ ಸೆಡ್ಡು ಹೊಡೆಯುತ್ತಿರುವುದರಲ್ಲಿ ಅನುಮಾನವಿಲ್ಲ.
ಹೌದು, ಕಲಬುರಗಿ ತಾಲೂಕಿನ ನಂದಿಕೂರ್ ಗ್ರಾಮದಲ್ಲಿ ಇಂತಹದೊಂದು ಮಾದರಿ ಅಂಗನವಾಡಿ ಕೇಂದ್ರವಿದೆ. ಇಲ್ಲಿನ ಸಿಡಿಪಿಒ, ಅಂಗನವಾಡಿ ಕಾರ್ಯಕರ್ತೆ, ಗ್ರಾಮಸ್ಥರ ವಿಶೇಷ ಆಸಕ್ತಿಯಿಂದ ಅಂಗನವಾಡಿ ಕೇಂದ್ರ ಹೈಟೆಕ್ ಆಗಿ ಬದಲಾಗಿದೆ. ಜೊತೆಗೆ ಶಿಕ್ಷಣ, ಸ್ವಚ್ಛತೆ, ಪರಿಸರ, ಪೌಷ್ಟಿಕ ಆಹಾರ ಹಾಗೂ ಇತರ ವಿಷಯದಲ್ಲಿ ಕಾನ್ವೆಂಟ್ ಶಾಲೆಗಿಂತಲೂ ಒಂದು ಹೆಜ್ಜೆ ಮುಂದೆ ಇದೆ.
ಗೋಡೆ ಬರಹದಿಂದ ಮಕ್ಕಳಿಗೆ ಜ್ಞಾನಾರ್ಜನೆ: ನಂದಿಕೂರ ಅಂಗನವಾಡಿ ಕೆಂದ್ರಕ್ಕೆ ಅಚ್ಚುಕಟ್ಟಾದ ಪುಟ್ಟ ಕಟ್ಟಡವಿದೆ. ಗೋಡೆಯ ಮೇಲೆ ಸುಂದರವಾದ ಕಾಡು, ಆನೆ, ಹುಲಿ, ಚಿರತೆ, ಮಂಗ ಇತರ ಪ್ರಾಣಿ ಪಕ್ಷಿಗಳ ಚಿತ್ರ, ಛೋಟಾ ಭೀಮ್, ಪುಟಾಣಿ ಗೊಂಬೆಗಳ ಚಿತ್ರಗಳು ಹೊರಗಿನಿಂದ ಸ್ವಾಗತ ಕೊರುತ್ತವೆ. ಕೇಂದ್ರದ ಒಳಗಿನ ಗೋಡೆಯಲ್ಲಿ ಕನ್ನಡ, ಇಂಗ್ಲಿಷ್ ಅಕ್ಷರಗಳ ವರ್ಣಮಾಲೆ, ಮೇಲ್ಚಾವಣಿಗೆ ಸೌರಮಂಡಲ, ಕಾಮನಬಿಲ್ಲು ಕಣ್ಮನ ಸೇಳೆಯುತ್ತದೆ. ಜೊತೆಗೆ ರಟ್ಟಿನ ಬಾಕ್ಸ್ಗಳಿಗೆ ಶೃಂಗರಿಸಿ ತಿಂಗಳು, ಹಬ್ಬ, ಹವಾಮಾನ ವರದಿ ಹೀಗೆ ಮಕ್ಕಳ ಜ್ಞಾನ ಹೆಚ್ಚಿಸಬಲ್ಲ ಎಲ್ಲ ಪ್ರಯತ್ನ ಮಾಡಲಾಗಿದೆ.
ಇದನ್ನೂ ಓದಿ:ಮಾದರಿ ನಿರ್ಧಾರ: ಮಗನನ್ನ ಸರ್ಕಾರಿ ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿ
ಶಿಸ್ತಿನ ಸಿಪಾಯಿಯಾದ ಮಕ್ಕಳು: ನಂದಿಕೂರ ಅಂಗನವಾಡಿ ಕೇಂದ್ರ ಮಕ್ಕಳಿಗೆ ಕೇವಲ ಮನೋರಂಜನೆ, ಊಟಕ್ಕೆ ಮಾತ್ರ ಸೀಮಿತವಾಗಿಲ್ಲ. ಶಿಸ್ತಿಗೆ ಕೂಡ ಅಷ್ಟೇ ಪ್ರಾಮುಖ್ಯತೆ ನೀಡಿದೆ. ಕಾನ್ವೆಂಟ್ ಶಾಲೆ ಮಕ್ಕಳಂತೆ ಸಮವಸ್ತ್ರ, ಬೆಲ್ಟ್, ಟೈ, ಐಡೆಂಟಿಟಿ ಕಾರ್ಡ್, ಶೂ ನೀಡಲಾಗಿದ್ದು, ಮಕ್ಕಳು ಅಂಗನವಾಡಿಗೆ ಬರುವಾಗ ನಿಯಮದಂತೆ ಟ್ರಿಮ್ ಆಗಿ ಬರ್ತಾರೆ. ಆಟದೊಂದಿಗೆ ಇಲ್ಲಿನ ಕಾರ್ಯಕರ್ತೆ ಕನ್ನಡ, ಇಂಗ್ಲಿಷ ಪಾಠ ಮಾಡ್ತಾರೆ.