ಕಲಬುರಗಿ: ತಂಗಿ ಮದುವೆಗೆ ಅಡ್ಡಿಪಡಿಸಬೇಡ ಎಂದು ಹೇಳಲು ಹೋದ ಅಣ್ಣನನ್ನು ಹತ್ಯೆಗೈದಿದ್ದ ಪ್ರಕರಣದ ಸಂಬಂಧ ನಾಲ್ವರು ಆರೋಪಿಗಳನ್ನು ವಿಶ್ವ ವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಂದಿರಾ ನಗರ ನಿವಾಸಿಗಳಾದ ಸಂಜು ಕುಮಾರ್ ದೊಡ್ಡಮನಿ, ಶಿವಕುಮಾರ್ ದೊಡ್ಡಮನಿ ಹಾಗೂ ವಿಜಯಕುಮಾರ್ ದೊಡ್ಡಮನಿ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ಉದಯ ಕುಮಾರ್ ದೊಡ್ಡಮನಿಗೆ ಗಲಾಟೆ ವೇಳೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ನಿಖಿಲ್ ಹಾಗೂ ಬಂಧಿತ ಆರೋಪಿಗಳು ಜೂನ್ 5 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ಜೇವರ್ಗಿ ರಸ್ತೆಯ ವಾಜಪೇಯ ಬಡಾವಣೆ ಹತ್ತಿರ ನಿಖಿಲ್ ಕಂಗಾರೆ (21) ಎಂಬ ಯುವಕನ ಕೊಲೆ ನಡೆದಿತ್ತು.
ಘಟನೆಯ ವಿವರ:
ಕೊಲೆಯಾದ ನಿಖಿಲ್‌ನ ತಂಗಿಗೆ ಮುಂಬೈ ಮೂಲದ ಸೋದರತ್ತೆಯ ಮಗ ಪ್ರದೀಪ ಎಂಬಾತನೊಂದಿಗೆ ಮದುವೆ ನಿಶ್ಚಯಿಸಲಾಗಿತ್ತು. ಆರೋಪಿ ಉದಯ ಕುಮಾರ್ ದೊಡ್ಡಮನಿ ಪ್ರದೀಪನಿಗೆ ಕರೆ ಮಾಡಿ ಆಕೆ ಮತ್ತು ನಾನು ಪ್ರೀತಿ ಮಾಡುತ್ತಿದ್ದೇವೆ. ನೀನು ಮದುವೆ ಮಾಡಿಕೊಂಡರೆ ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದ. ಈ ವಿಷಯ ತಿಳಿದ ನಿಖಿಲ್, ತನ್ನ ತಾಯಿ ಕಮಲಾಬಾಯಿ, ಅಣ್ಣ ವಿಕಾಸ್ ಹಾಗೂ ಸಂಬಂಧಿ ಹನುಮಂತ ಸೇರಿ ವಾಜಪೇಯಿ ತರಕಾರಿ ಮಾರುಕಟ್ಟೆಯಲ್ಲಿದ್ದ ಉದಯ ಕುಮಾರ್ನ ಬಳಿ ಕೇಳಲು ಹೋಗಿದ್ದಾರೆ.
ಈ ವೇಳೆ ಪರಸ್ಪರ ವಾಗ್ವಾದ ನಡೆದು ಗಲಾಟೆಯಾಗಿದೆ. ಆಗ ಉದಯ ಕುಮಾರ್ ತನ್ನ ಸಹೋದರರು ಮತ್ತು ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಕೇಳಲು ಬಂದವರ ಮೇಲೆ ಕಬ್ಬಿಣದ ರಾಡ್, ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ನಿಖಿಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ತಾಯಿ ಹಾಗೂ ಸಂಬಂಧಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ವಿಶ್ವ ವಿದ್ಯಾಲಯ ಪೊಲೀಸರು ಸದ್ಯ ನಾಲ್ವರನ್ನು ಬಂಧಿಸಿದ್ದು, ಇನ್ನುಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಓದಿ:ಕ್ಷುಲಕ ಕಾರಣಕ್ಕೆ ಆರಂಭವಾದ ಜಗಳ 20 ವರ್ಷದ ಯುವಕನ ಕೊಲೆಯಲ್ಲಿ ಅಂತ್ಯ