ಕಲಬುರಗಿ :ಸೀಲ್‌ಡೌನ್ ತೆರವು ಮಾಡಲು ಹೋದ ಸಂಸದ ಡಾ. ಉಮೇಶ್ ಜಾಧವ್ ಅವರಿಗೆ ಶೇಮ್ ಶೇಮ್ ಎಂದು ಘೋಷಣೆ ಕೂಗಿ ಪುರಸಭೆ ಸದಸ್ಯರು ಸೀಲ್‌ಡೌನ್ ಬ್ಯಾರಿಕೇಡ್ ತೆರವುಗೊಳಿಸಲು ವಿರೋಧಿಸಿದ್ದಾರೆ.
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಎರಡು ವರ್ಷದ ಬಾಲಕನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ವಾಡಿಯ ಪಿಲಕಮ್ ಪ್ರದೇಶ ಸೇರಿ ನಾಲ್ಕು ಏರಿಯಾಗಳನ್ನು ಸೀಲ್‌ಡೌನ್ ಮಾಡಲಾಗಿತ್ತು. ಬಾಲಕ ಗುಣಮುಖನಾಗಿ ವಾಪಸ್ ಬಂದ ಹಿನ್ನೆಲೆ ಸೀಲ್‌ಡೌನ್ ಅವಧಿ ಮುಗಿದ ಕಾರಣ ಇಂದು ವಾಡಿ ಪಟ್ಟಣಕ್ಕೆ ಭೇಟಿ ನೀಡಿದ್ದ ಸಂಸದ ಉಮೇಶ್ ಜಾಧವ್ ಸೀಲ್‌ಡೌನ್ ಹಿನ್ನೆಲೆಯಲ್ಲಿ ಹಾಕಿದ್ದ ಬ್ಯಾರಿಕೇಡ್ ತೆಗೆಯಲು ಮುಂದಾದರು.
ಸೀಲ್‌ಡೌನ್ ತೆರವು ವೇಳೆ ಗಲಾಟೆ.. ಈ ವೇಳೆ ಸ್ಥಳಿಯ ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರು ಬ್ಯಾರಿಕೇಡ್ ತೆರವುಗೊಳಿಸಲು ವಿರೋಧಿಸಿದರು. ಇದೇನು ಉದ್ಘಾಟನೆಯೇ ಎಂದು ಪ್ರಶ್ನಿಸಿದ ಕಾಂಗ್ರೆಸ್ ಪುರಸಭೆ ಸದಸ್ಯರು ವಾಡಿಯಲ್ಲಿ ಕೊರೊನಾ ಪ್ರಕರಣ ಪತ್ತೆಯಾದಾಗ ಬರಲಿಲ್ಲ. ಸೀಲ್‌ಡೌನ್ ಮಾಡಿದಾಗಲೂ ವಾಡಿ ಜನರನ್ನು ವಿಚಾರಿಸಲಿಲ್ಲ. ಈಗ ಯಾವ ಪುರುಷಾರ್ಥಕ್ಕೆ ಬಂದಿದ್ದೀರಿ ಸೀಲ್ ಡೌನ್ ತೆರವು ಅಂದ್ರೆ ಅದೇನು ಕಾಮಗಾರಿ ಉದ್ಘಾಟನೆಯಾ ಎಂದು ಪ್ರಶ್ನಿಸಿದರು.
ಈ ವೇಳೆ ಸಂಸದ ಜಾಧವ್ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಬ್ಯಾರಿಕೇಡ್ ತೆರವುಗೊಳಿಸಲು ವಿರೋಧಿಸಿದವರನ್ನು ತಡೆದು ಎಳೆದೊಯ್ದರು. ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಗದ್ದಲದಲ್ಲಿಯೇ ಬ್ಯಾರಿಕೇಡ್ ಸರಿಸಿ ಎಂ ಪಿ ಜಾಧವ್ ವಾಪಸ್ ಹೋದರು. ಜಾಧವ್ ಕಾರ್‌ನಲ್ಲಿ ಕುಳಿತು ತೆರಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಎಂಪಿ ಶೇಮ್ ಶೇಮ್ ಎಂದು ಘೋಷಣೆ ಕೂಗಿದರು.