ಕಲಬುರಗಿ: ಡಿಸಿಎಂ ಡಿ.ಕೆ ಶಿವಕುಮಾರ್ 70 ಶಾಸಕರ ಬಲದೊಂದಿಗೆ ತಾವೇ ಸಿಎಂ ಆಗಲು ಪ್ರಯತ್ನ ಮಾಡ್ತಿದ್ದಾರೆ ಎಂಬ ಬಸವನಗೌಡ ಪಾಟೀಲ್ ಯತ್ನಾಳ ಹೇಳಿಕೆಗೆ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಯತ್ನಾಳ ಮೊದಲು ತಮ್ಮ ಪಕ್ಷದಲ್ಲಿ ಏನಾಗ್ತಿದೆ ನೋಡಿಕೊಳ್ಳಲಿ ಇಲ್ಲಿವರಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಲ್ಲ, ರಾಜ್ಯ ನಾಯಕರ ಗಮನಕ್ಕೂ ತರದೇ ಜೆಡಿಎಸ್ ಜೊತೆ ಬಿಜೆಪಿ ನಾಯಕರು ಮೈತ್ರಿ ಮಾಡಿಕೊಂಡಿದ್ದಾರೆ. ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸದಾನಂದ ಗೌಡ ಮಾಜಿ ಕೇಂದ್ರ ಸಚಿವರು ಆದರೂ ದೆಹಲಿಯಲ್ಲಿ ಭೇಟಿಯಾಗಲು ಇವರಿಗೆ ಬಾಗಿಲು ತೆರೆಯಲಿಲ್ಲ, ಕನ್ನಡಿಗರ ಮರ್ಯಾದೆ ಇನ್ನೂ ಎಷ್ಟು ತೆಗಿಯಬೇಕು ಅಂದುಕೊಂಡಿದ್ದಿರಿ ಬಿಜೆಪಿಯವರೆ ಎಂದು ಮರು ಪ್ರಶ್ನೆ ಮಾಡಿದರು. ವಿಪಕ್ಷ ನಾಯಕರನ್ನೇ ಇಲ್ಲಿಯವರೆಗೂ ನೇಮಕ ಮಾಡೋಕೆ ಆಗಿಲ್ಲ ಎಂದು ಹರಿಹಾಯ್ದರು.
ಜಾರಕಿಹೊಳಿ ಸಿಡಿ ಕೇಸ್ ವಿಚಾರ:ಸಿಡಿ ಕೇಸ್ ಸಿಬಿಐಗೆ ಒಪ್ಪಿಸಬೇಕು ಅಂತ ರಮೇಶ್ ಜಾರಕಿಹೊಳಿ ಸಿಎಂಗೆ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರೀಯಾಂಕ್ ಖರ್ಗೆ, ಈ ಹಿಂದೆ ಅವರದ್ದೇ ಡಬಲ್ ಇಂಜಿನ್ ಸರ್ಕಾರ ಇತ್ತಲ್ಲ. ಅವಗ್ಯಾಕೆ ಸಿಬಿಐಗೆ ಕೊಡಲಿಲ್ಲ. ಅಂದ್ರೆ ಮಾಜಿ ಸಚಿವರಿಗೆ ಹಿಂದಿನ ಸರ್ಕಾರ ಕಿಮತ್ತು ಕೊಟ್ಟಿಲ್ವಾ..? ನಾವ್ಯಾಕೆ ಸಿಬಿಐಗೆ ಕೊಡಬೇಕು. ನಮ್ಮ ಆದ್ಯತೆ ಸಿಡಿ ಪ್ರಕರಣ ಅಲ್ಲ. ನಮ್ಮ ಆದ್ಯತೆ ಜನ ಕಲ್ಯಾಣ, ಗ್ಯಾರಂಟಿ ಯೋಜನೆ ನೀಡೋದು ಎಂದರು.