ಕರ್ನಾಟಕ

karnataka

ETV Bharat / state

ಜ.19ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ: ಅಧಿಕಾರಿಗಳ ಜೊತೆ ಸಚಿವ ಆರ್ ಅಶೋಕ್ ಪೂರ್ವ ಸಿದ್ಧತೆ ​ಸಭೆ - ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್

ಜನವರಿ 19ಕ್ಕೆ ಕಲಬುರಗಿಗೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ - ಈ ಹಿನ್ನೆಲೆ ಕಾರ್ಯಕ್ರಮದ ಕಟ್ಟು ನಿಟ್ಟಿನ ಕುರಿತು ಸಭೆ ನಡೆಸಿದ ಕಂದಾಯ ಸಚಿವ ಆರ್​ ಅಶೋಕ್​.

Ministers holding a meeting in Kalaburagi on the background of Modi's arrival
ಮೋದಿ ಆಗಮನ ಹಿನ್ನೆಲೆ ಕಲಬುರಗಿಯಲ್ಲಿ ಸಭೆ ನಡೆಸುತ್ತಿರುವ ಸಚಿವರು

By

Published : Jan 14, 2023, 8:19 AM IST

ಕಲಬುರಗಿ:ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಜನವರಿ 19ಕ್ಕೆ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕಂದಾಯ ಸಚಿವ ಆರ್.ಅಶೋಕ ಅವರು ಕಲಬುರಗಿ ನಗರದ ಐವಾನ್-ಎ-ಶಾಹಿತಿ ಅತಿಥಿಗೃಹದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತೆ ಪರಿಶೀಲನಾ ಸಭೆ ನಡೆಸಿದರು.

ಪ್ರಧಾನಮಂತ್ರಿಗಳು ಅಂದು ಮಳಖೇಡ್‍ದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಇತಿಹಾಸದಲ್ಲಿಯೇ ಏಕಕಾಲದಲ್ಲಿ ಕಲಬುರಗಿ ಸೇರಿದಂತೆ ರಾಯಚೂರು, ಬೀದರ್​, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಿದ್ದು, ಕಾರ್ಯಕ್ರಮ ಶಿಷ್ಠಾಚಾರದಂತೆ ಅಚ್ಚುಕಟ್ಟಾಗಿ ನೆರವೇರುವಂತೆ ಎಲ್ಲಾ ಪೂರ್ವಸಿದ್ಧತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳ ಫಲಾನುಭವಿಗಳ ಜೊತೆಗೆ ಮೋದಿ ಅಭಿಮಾನಿಗಳು ಸಹ ಆಗಮಿಸುವುದರಿಂದ, ಬೃಹತ್ ಜರ್ಮನ್ ವೇದಿಕೆ ನಿರ್ಮಾಣ, ಹೆಲಿಪ್ಯಾಡ್ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ, ಸುಗಮ ಸಂಚಾರ, ಸಾರ್ವಜನಿಕರ ಮತ್ತು ಗಣ್ಯರ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಊಟ, ಸ್ವಚ್ಛತೆ, ಭದ್ರತೆ ಹೀಗೆ ಎಲ್ಲವು ವ್ಯವಸ್ಥಿತವಾಗಿರಬೇಕು. ಅಂದು ಫಲಾನುಭವಿಗಳನ್ನು ಬೆಳಿಗ್ಗೆ ಊರಿನಿಂದ ಬಿಡುವಾಗಲೇ ಉಪಹಾರ ಮಾಡಿಕೊಂಡೇ ಕರೆತರಬೇಕು. ಮುನ್ನೆಚ್ಚರಿಕೆಯಾಗಿ ಕಾರ್ಯಕ್ರಮ ಸ್ಥಳದಲ್ಲಿ ಆಂಬ್ಯಬುಲೆನ್ಸ್, ಅಗ್ನಿಶಾಮಕ ವಾಹನ ತಯಾರಿರಬೇಕು.

ಬೇರೆ ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರುವ ಅಧಿಕಾರಿಗಳೊಂದಿಗೆ ಹಿರಿಯ ಅಧಿಕಾರಿಗಳನ್ನು ಸಮನ್ವಯ ಅಧಿಕಾರಿಗಳನ್ನಾಗಿ ಸಾಧಿಸಬೇಕು ಎಂದು ಸೂಚಿಸಿದ ಸಚಿವರು, ಯಾವುದೇ ಲೋಪಕ್ಕೆ ಇಲ್ಲಿ ಅವಕಾಶ ನೀಡಕೂಡದು ಎಂದು ಎಚ್ಚರಿಕೆ ನೀಡಿದರು. ರಾಜ್ಯ ಹೆದ್ದಾರಿ-10ರಲ್ಲಿ ಅಂದು 60 ಕಿ.ಮಿ. ಅಂತರದಲ್ಲಿ ಆಂಬ್ಯುಲೆನ್ಸ್ ಸೇವೆ(108) ಒದಗಿಸಬೇಕು. ವಿವಿಧ ಜಿಲ್ಲೆಗಳಿಂದ ಬಸ್‍ಗಳಲ್ಲಿ ಫಲಾನುಭವಿಗಳು ಬರುವುದರಿಂದ ಬಸ್‍ಗಳು ಕೆಟ್ಟಲ್ಲಿ ಕೂಡಲೇ ದುರಸ್ತಿಗೂ ಏರ್ಪಾಡು ಮಾಡಬೇಕು ಎಂದು ಸಚಿವ ಆರ್.ಅಶೋಕ್ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಜನದಟ್ಟನೆಯಾಗದಂತೆ ನೋಡಿಕೊಳ್ಳಿ:ವಿಶೇಷವಾಗಿ ಕಾರ್ಯಕ್ರಮಕ್ಕೆ ಫಲಾನುಭವಿಗಳ ಹೊರತಾಗಿ ಸಾರ್ವಜನಿಕರು, ಮೋದಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅಲ್ಲಲ್ಲಿ ಪ್ರವೇಶಕ್ಕೆ ಅವಕಾಶ ನೀಡಿ ಬ್ಯಾರಿಕೇಡ್ ಹಾಕಬೇಕು. ಇಡೀ ಪ್ರಾಂಗಣ ಸುತ್ತಾಕುವಂತಾಗಬಾರದು. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ತುಂಬಾ ಎಚ್ಚರಿಕೆಯಿಂದ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು. ಯಾವುದೇ ರೀತಿಯಲ್ಲಿ ಕಾರ್ಯಕ್ರಮ ಸುತ್ತಮುತ್ತ ಮತ್ತು ರಾಜ್ಯ ಹೆದ್ದಾರಿಯಲ್ಲಿ ಜನದಟ್ಟನೆಯಾಗದಂತೆ ಸುಗಮ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಎಸ್.ಪಿ. ಇಶಾ ಪಂತ್ ಅವರಿಗೆ ನಿರ್ದೇಶನ ನೀಡಿದರು.

ಬಳಿಕ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಆರ್.ಅಶೋಕ್​, ಊಟಕ್ಕೆ 200 ಕೌಂಟರ್ ಸ್ಥಾಪಿಸಲಾಗುತಿದ್ದು, 600 ಬಾಣಸಿಗರು ಇರಲಿದ್ದಾರೆ. ಜಿಲ್ಲೆಯ ವಿವಿಧ ಸ್ಥಳಗಳಿಂದ ಫಲಾನುಭವಿಗಳನ್ನು ಕರೆತರಲು 2,582 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಬಸ್‍ಗೆ ಮತ್ತು ಫಲಾನುಭವಿಗಳನ್ನು ನೋಡಿಕೊಳ್ಳಲು ಗ್ರಾಮ ಲೆಕ್ಕಿಗರನ್ನು ನಿಯೋಜಿಸಲಾಗಿದೆ. ಮುಖ್ಯ ವೇದಿಕೆ ಜರ್ಮನ್ ಟೆಂಟ್‍ನಿಂದ ಕೂಡಿರಲಿದ್ದು, ಐದು ಕಡೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಚಿವರಿಂದ ಭೂಮಿ ಪೂಜೆ:ನಂತರ ಸಚಿವ ಆರ್.ಅಶೋಕ ಅವರು ಪ್ರಧಾನಮಂತ್ರಿಗಳ ಕಾರ್ಯಕ್ರಮ ನಿಗದಿಯಾಗಿರುವ ಸೇಡಂ ತಾಲೂಕಿನ ಮಳಖೇಡ್ ರಾಜ್ಯ ಹೆದ್ದಾರಿ-10ಕ್ಕೆ ಹೊಂದಿಕೊಂಡಿರುವ ಸ್ಥಳಕ್ಕೆ ಭೇಟಿ ನೀಡಿ, ವೇದಿಕೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದರು. ವೇದಿಕೆ ಸ್ಥಳ, ಸಾರ್ವಜನಿಕ ಆಸನದ ಸ್ಥಳ, ಊಟದ ಕೌಂಟರ್ ಸ್ಥಳ ಎಲ್ಲವನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ನೆಲಸಮಗೊಳಿಸುವ ಕಾರ್ಯದಲ್ಲಿ ನಿರತವಾಗಿದ್ದ ಟ್ರ್ಯಾಕ್ಟರ್ ಹತ್ತಿದ ಸಚಿವರು, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ ಸೇರಿದಂತೆ ಇನ್ನಿತರು ಕೂಡಿಸಿಕೊಂಡು ಒಂದು ಸುತ್ತು ಟ್ರಾಕ್ಟರ್ ಚಲಿಸಿ ಗಮನ ಸೆಳೆದರು. ಶಾಸಕ ಡಾ. ಅವಿನಾಶ ಜಾಧವ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಎಸ್.ಪಿ. ಇಶಾ ಪಂತ್, ಸಹಾಯಕ ಆಯುಕ್ತ ಕಾರ್ತಿಕ ರೆಡ್ಡಿ, ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ಸೇರಿದಂತೆ ಇನ್ನಿತರರು ಇದ್ದರು.

ಇದನ್ನೂ ಓದಿ:ರಾಜ್ಯಕ್ಕೆ ಮೋದಿ ಬರ್ತಾರೆ ಎಂದರೆ ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ನಡುಕ: ಸಚಿವ ಆರ್ ಅಶೋಕ್​

ABOUT THE AUTHOR

...view details