ಕಲಬುರಗಿ: ಸದ್ಯ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಭಾರಿ ಸದ್ದು ಮಾಡ್ತಿದೆ. ಸಿನಿಮಾ ನಟರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಸಹ ಈ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.
ಈ ಡ್ರಗ್ಸ್ ಮಾಫಿಯಾಗೂ ಕಲಬುರಗಿಗೆ ನಂಟಿದೆ ಎಂಬ ಅನುಮಾನಗಳು ಶುರುವಾಗಿವೆ. ಕಳೆದೆರಡು ದಿನಗಳ ಹಿಂದೆ ದೊಡ್ಡ ಮೊತ್ತದ ಅಕ್ರಮ ಗಾಂಜಾ ಪ್ರಕರಣ ಕಲಬುರಗಿ ಮಾತ್ರವಲ್ಲದೇ ಇಡಿ ರಾಜ್ಯದ ಜನರನ್ನು ಬೆಚ್ಚಿಬೀಳಿಸಿತ್ತು.
ಜಿಲ್ಲೆಯ ಕಾಳಗಿ ಪಟ್ಟಣದ ಕುರಿ ಫಾರ್ಮ್ನ ಅಂಡರ್ ಗ್ರೌಂಡ್ನಲ್ಲಿ ಅಪಾರ ಪ್ರಮಾಣದ ಗಾಂಜಾ ಶೇಖರಣೆ ಮಾಡಿರುವುದನ್ನು ಬೆಂಗಳೂರು ಶೇಷಾದ್ರಿಪುರಂ ಪೊಲೀಸರು ಕಾರ್ಯಾಚರಣೆ ನಡೆಸಿ ಬಯಲಿಗೆ ಎಳೆದಿದ್ದರು. ಕಾಳಗಿ ಪಟ್ಟಣದ ಹೊರವಲಯದಲ್ಲಿರುವ ಲಕ್ಷ್ಮಣನಾಯಕ್ ತಾಂಡಾದ ಕುರಿದೊಡ್ಡಿ ಒಂದರಲ್ಲಿ ಸುಮಾರು 6 ಕೋಟಿ ರೂ. ಮೌಲ್ಯದ 1,352 ಕೆಜಿ ಗಾಂಜಾವನ್ನು ಪೊಲೀಸರು ಪತ್ತೆ ಹಚ್ಚಿದ್ದರು.
ನೆರೆ ರಾಜ್ಯದ ಜೊತೆ ಗಾಂಜಾ ನಂಟು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ಸಿದ್ಧನಾಥ್ ಎಂಬ ಆರೋಪಿ ನೀಡಿದ ಮಾಹಿತಿ ಮೇಲೆ ಕಲಬುರಗಿಗೆ ಧಾವಿಸಿದ ಪೋಲಿಸರಿಗೆ ದೊಡ್ಡ ಶಾಕ್ ಎದುರಾಗಿತ್ತು. ಮೂರು-ನಾಲ್ಕು ದಿನಗಳ ಕಾಲ ತಿರುಗಾಡಿ, ಕೊನೆಗೆ ಗಾಂಜಾ ಖರೀದಿದಾರರ ವೇಷದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ವಿಶೇಷವೆಂದರೆ ಈ ಬಗ್ಗೆ ತನಿಖೆ ಆರಂಭಿಸಿದ ಬೆಂಗಳೂರು ಪೊಲೀಸರು ಕಲಬುರಗಿ ಸ್ಥಳೀಯ ಪೊಲೀಸರಿಗೂ ಕೂಡ ಮಾಹಿತಿ ನೀಡದೆ ಕಾರ್ಯಾಚರಣೆ ನಡೆಸಿ ಬೃಹತ್ ಮೊತ್ತದ ಅಕ್ರಮ ಗಾಂಜಾ ಪ್ರಕರಣವನ್ನು ಬೇಧಿಸಿದ್ದಾರೆ.
ನಂತರ ವಿಚಾರಣೆ ವೇಳೆ ಕುರಿದೊಡ್ಡಿಯಲ್ಲಿ ಗಾಂಜಾ ಅಡಗಿಸಿಟ್ಟಿರುವುದಾಗಿ ಬಾಯಿ ಬಿಟ್ಟಿದ್ದರು. ಲಕ್ಷ್ಮಣ ನಾಯಕ ತಾಂಡಾದ ಚಂದ್ರಕಾಂತ್ ಚವ್ಹಾಣ ಎಂಬಾತನಿಗೆ ಸೇರಿದ ಕುರಿದೊಡ್ಡಿಯಲ್ಲಿ ಬೃಹತ್ ಮೊತ್ತದ ಗಾಂಜಾ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುರಿದೊಡ್ಡಿ ಮಾಲೀಕ ಚಂದ್ರಕಾಂತ್ ಚವ್ಹಾಣ್ ಹಾಗೂ ನಾಗನಾಥ್ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಒರಿಸ್ಸಾದಿಂದ ಗಾಂಜಾ ಆಮದು: ಕೃಷಿಕ, ಕುರಿ ಸಾಕಾಣೆ ಹಾಗೂ ಹೈನುಗಾರಿಕೆಯ ವ್ಯವಸಾಯವನ್ನು ಹೊರ ಜಗತ್ತಿಗೆ ತೋರಿಸಿ, ಅಕ್ರಮ ಗಾಂಜಾ ಮಾರಾಟ ನಡೆಸುತ್ತಿದ್ದರು ಎನ್ನಲಾಗಿದೆ. ಆರೋಪಿ ಚಂದ್ರಕಾಂತ ವಿಚಾರಣೆ ಒರಿಸ್ಸಾ, ತೆಲಂಗಾಣ, ಕರ್ನಾಟಕದ ಬೇರೆ ಪ್ರದೇಶಗಳಿಂದಲೂ ಅಕ್ರಮವಾಗಿ ಗಾಂಜಾ ಸರಬರಾಜು ಆಗುತ್ತಿದೆ ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಾರಾಟ ಮಾಡಲಾಗುತ್ತಿತ್ತು. ಕಾಲೇಜು ವಿದ್ಯಾರ್ಥಿಗಳಿಗೂ ಗಾಂಜಾ ಪೂರೈಕೆ ಮಾಡಲಾಗುವ ಮಾಹಿತಿಯನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸ್ಥಳೀಯ ಪೊಲೀಸರಿಂದ ಯಾವುದೇ ರೀತಿಯ ನೆರವು ಪಡೆದುಕೊಳ್ಳದೇ ಅಕ್ರಮ ಗಾಂಜಾ ಪ್ರಕರಣವನ್ನು ಬೇಧಿಸಲಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಸದ್ಯ ಕಲಬುರಗಿಯಲ್ಲಿ ಕಳೆದ ಒಂದು ವಾರದಿಂದ ಗಾಂಜಾ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲಿವರೆಗೂ 6ರಿಂದ 8 ಆರೋಪಿಗಳನ್ನು ಕಲಬುರಗಿ ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಂ ಜಾರ್ಜ್ ತಿಳಿಸಿದ್ದಾರೆ.
ಕೊರೊನಾದಿಂದ ರಾಷ್ಟ್ರಮಟ್ಟದವರಗೆ ಸುದ್ದಿಯಾದ ಕಲಬುರಗಿ ಈಗ ಗಾಂಜಾ ಮಾಫಿಯಾ ಮೂಲಕ ಇಡೀ ರಾಜ್ಯದಲ್ಲಿ ಮತ್ತೆ ಅಪಕೀರ್ತಿಗೆ ಕಾರಣವಾಗಿದೆ. ಮಾದಕ ವಸ್ತುಗಳ ತಡೆಗೆ ಪೊಲೀಸರು ಮತ್ತಷ್ಟು ಕಾರ್ಯಚರಣೆ ಚುರುಕುಗೊಳಿಸುವ ಮೂಲಕ ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.