ಕಲಬುರಗಿ: ಚಿತ್ತಾಪುರ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸಿದರು.
ಚಿತ್ತಾಪುರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಪ್ರಿಯಾಂಕ್ ಖರ್ಗೆ
ಒಂದು ವಾರದಿಂದ ಚಿತ್ತಾಪುರ ತಾಲೂಕಿನಾದ್ಯಂತ ಭೀಕರ ಮಳೆಯಾಗಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿವೆ. ತಮ್ಮ ಕ್ಷೇತ್ರದ ಜನರ ಕಷ್ಟಗಳನ್ನರಿಯಲು ಶಾಸಕ ಪ್ರಿಯಾಂಕ್ ಖರ್ಗೆ ಪ್ರವಾಹ ಪೀಡಿತ ಕ್ಷೇತ್ರಗಳಿಗೆ ತೆರಳುತ್ತಿದ್ದು, ನೊಂದ ಜನರಿಗೆ ಸಾಂತ್ವನ ಹೇಳಿ ಪ್ರವಾಹದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾ ಮಳೆಗೆ ಚಿತ್ತಾಪುರ ತಾಲೂಕಿನ ನದಿಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿರುವ ಪರಿಣಾಮ ಹಲವು ಗ್ರಾಮಗಳಿಗೆ ನೀರು ಹೊಕ್ಕು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಾವಿರಾರು ಎಕರೆ ಜಮೀನು ನೀರುಪಾಲಾಗಿದ್ದು, ಬೆಳೆದ ಬೆಳೆಗಳೆಲ್ಲವೂ ಸಂಪೂರ್ಣ ನಾಶವಾಗಿದೆ. ಭೀಮಾ ನದಿ ಪ್ರವಾಹಕ್ಕೆ ಬಡಪಾಯಿಗಳ ಬದುಕು ಬೀದಿಪಾಲಾಗಿದ್ದು, ತಮ್ಮ ಕ್ಷೇತ್ರದ ಜನರ ಸಂಕಷ್ಟ ಅರಿಯುವ ಸಲುವಾಗಿ ಪ್ರಿಯಾಂಕ್ ಖರ್ಗೆ ಕಳೆದ ಎರಡು ದಿನದಿಂದ ಕ್ಷೇತ್ರದ ಪ್ರವಾಸ ಕೈಗೊಂಡಿದ್ದಾರೆ.
ಸತತ ಎರಡು ದಿನದಿಂದ ಚಿತ್ತಾಪುರ ತಾಲೂಕಿನ ಸುಮಾರು ಹತ್ತಕ್ಕೂ ಅಧಿಕ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ಶಾಸಜಕರು, ನೊಂದ ಜನರಿಗೆ ಸಾಂತ್ವನ ಹೇಳಿ ಪ್ರವಾಹದ ಕುರಿತು ಮಾಹಿತಿ ಪಡೆದುಕೊಂಡು ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.