ಕಲಬುರ್ಗಿ :ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮತ್ತೊಂದು ಹೆಜ್ಜೆ ಇರಿಸಿದೆ. ಹೊಸದಾಗಿ ಅನುಷ್ಠಾನಕ್ಕೆ ತರಲಾದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಕಚೇರಿಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ದಿ ಕಚೇರಿಯನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಸಿಎಂ..
₹500 ಕೋಟಿ ಅನುದಾನ ನೀಡಿ ಕೃಷಿ ಮತ್ತು ಸಾಂಸ್ಕೃತಿಕ ಮಾನವ ಸಂಪನ್ಮೂಲ ಬೆಳವಣಿಗೆಗೆ ರಾಜ್ಯ ಸರ್ಕಾರ ಪಣ ತೊಟ್ಟಿರುವುದಾಗಿ ಸಿಎಂ ಹೇಳಿಕೆ.
ನಗರದ ಐವಾನ್ ಶಾಹಿ ಪ್ರದೇಶದಲ್ಲಿ ತೆರೆಯಲಾದ ನೂತನ ಕಚೇರಿಯನ್ನು ಕೊವೀಡ್-19 ಹಿನ್ನೆಲೆ ಸಿಎಂ ಯಡಿಯೂರಪ್ಪ ಬೆಂಗಳೂರಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸರಳವಾಗಿ ಉದ್ಘಾಟನೆ ಮಾಡಿದರು. ಉದ್ಘಾಟಕರಾಗಿ ವಿಜಯಪುರದ ಜ್ಞಾನಯೋಗ ಆಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಚೇರಿಯಲ್ಲಿ ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ, ಸಂಸದ ಡಾ. ಉಮೇಶ್ ಜಾಧವ್ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ವೇಳೆ ಕಲ್ಯಾಣ ಕರ್ನಾಟಕ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಈ ಭಾಗದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದೇವೆ. ಕೆಕೆಆರ್‌ಡಿಬಿಗೆ ನೀಡುವ ಅನುದಾನವಲ್ಲದೆ ಪ್ರತ್ಯೇಕವಾಗಿ ನೂತನವಾಗಿ ಅನುಷ್ಠಾನಕ್ಕೆ ತರಲಾದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ₹500 ಕೋಟಿ ಅನುದಾನ ನೀಡಿ ಕೃಷಿ ಮತ್ತು ಸಾಂಸ್ಕೃತಿಕ ಮಾನವ ಸಂಪನ್ಮೂಲ ಬೆಳವಣಿಗೆಗೆ ಪಣ ತೊಟ್ಟಿರುವುದಾಗಿ ಹೇಳಿದರು.