ಕಲಬುರಗಿ:ಕಲಬುರಗಿ - ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ಗೆ ನೀರಿಕ್ಷೆಯಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಆಪ್ತವಲಯದ ಸೋಮಶೇಖರ್ ಗೋನಾಯಕ್ ಅವಿರೋಧ ಆಯ್ಕೆ ಆಗಿದ್ದಾರೆ. ನಾಲ್ಕು ಬಾರಿ ನಿರ್ದೇಶಕರಾಗಿ ಒಂದು ಬಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಸೋಮಶೇಖರ ಗೋನಾಯಕ್ ಇದೀಗ ಎರಡನೇ ಬಾರಿಗೆ ಡಿಸಿಸಿ ಬ್ಯಾಂಕ್ ಸಾರಥಿ ಆಗಿದ್ದಾರೆ.
ಇದರೊಂದಿಗೆ ಡಿಸಿಸಿ ಬ್ಯಾಂಕ್ ಅನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ತನ್ನ ಹಿಡಿತಕ್ಕೆ ಪಡೆಯುವಲ್ಲಿ ಸಫಲಗೊಂಡಿದೆ. ಮುಂದಿನ ಮೂರು ವರ್ಷಗಳ ಕಾಲ ಗೋನಾಯಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬ್ಯಾಂಕ್‌ನ 13 ನಿರ್ದೇಶಕರು, ಒಬ್ಬರು ನಾಮನಿರ್ದೇಶಿತ ನಿರ್ದೇಶಕ, 1 ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ, ಸಹಕಾರ ಸಂಘಗಳ ಉಪ ನಿಬಂಧಕರು ಸೇರಿ ಒಟ್ಟು 16 ಜನ ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ.
ಇದರಲ್ಲಿ 9 ಜನ ಕಾಂಗ್ರೆಸ್ ಬೆಂಬಲಿತ ಹಾಗೂ 4 ಜನ ಬಿಜೆಪಿ ಬೆಂಬಲಿತ ನಿರ್ದೇಶಕರಿದ್ದಾರೆ. ಕಾಂಗ್ರೆಸ್ ಬೆಂಬಲಿತ 9 ನಿರ್ದೇಶಕರು, 1 ನಾಮನಿರ್ದೇಶಿತ, 1 ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ, ಸಹಕಾರ ಸಂಘಗಳ ಉಪ ನಿಬಂಧಕರು ಸೇರಿ ಒಟ್ಟು ಕಾಂಗ್ರೆಸ್ ಪರವಾಗಿ ಚಲಾವಣೆಯಾಗಬಲ್ಲ 12 ಮತಗಳಿದ್ದವು. ಆದರೆ, ಬಿಜೆಪಿ ಬೆಂಬಲಿತ 4 ಮತಗಳು ಮಾತ್ರ ಇದ್ದವು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೋನಾಯಕ್ ಹೊರತು ಪಡೆಸಿ ಮತ್ಯಾರು ನಾಮಪತ್ರ ಸಲ್ಲಿಸಿರಲಿಲ್ಲ.
ಕಲಬುರಗಿಯ ಜಗತ್ ವೃತ್ತದ ಬಳಿ ಇರುವ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಚುನಾವಣೆ ನಡೆದು, ನಿಗದಿತ ಸಮಯ ಮುಗಿಯುವವರೆಗೂ ಗೋನಾಯಕ್ ಹೊರೆತು ಪಡಿಸಿ ಮತ್ಯಾರು ಉಮೇದುವಾರಿಕೆ ಸಲ್ಲಿಸದ ಕಾರಣ ನಾಮಪತ್ರ ಅಂಗೀಕರಿಸಿ ಸೋಮಶೇಖರ ಗೋನಾಯಕ್ ಅವರನ್ನೇ ಅವರೋಧ ಆಯ್ಕೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಾಯಕ ಆಯುಕ್ತೆ ಮಮತಾಕುಮಾರಿ ಘೋಷಣೆ ಮಾಡಿದರು.