ಕಲಬುರಗಿ:ಜಿಲ್ಲೆಯ ಅಫಜಲಪುರ ತಾಲೂಕಿನ ಚಿಣಮಗೇರಿ ಸರ್ಕಾರಿ ಶಾಲೆಯ ಮಧ್ಯಾಹ್ನದ ಬಿಸಿಯೂಟದ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎರಡನೇ ತರಗತಿ ವಿದ್ಯಾರ್ಥಿನಿ ಮಹಾಂತಮ್ಮ ತಳವಾರ (8) ಚಿಕಿತ್ಸೆ ಫಲಿಸದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಮಂಗಳವಾರ ನಸುಕಿನ ಜಾವ ಪಾರ್ಥಿವ ಶರೀರಿ ಹೊತ್ತ ಆಂಬ್ಯುಲೆನ್ಸ್ ಬಾಲಕಿಯ ಹುಟ್ಟೂರಾದ ಚಿಣಮಗೇರಿ ಗ್ರಾಮಕ್ಕೆ ತಲುಪಿದ್ದು, ಬಾಲಕಿ ಕುಟುಂಬಕ್ಕೆ ಪರಿಹಾರ ಸಿಗುವರೆಗೆ ಅಂತ್ಯಸಂಸ್ಕಾರ ನೇರವೇರಿಸದಿರಲು ಮುಖಂಡರು ಪಟ್ಟು ಹಿಡಿದು ಕುಳಿತಿದ್ದಾರೆ.
ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟದ ಸಮಯದಲ್ಲಿ ಮಹಾಂತಮ್ಮ ಸಾಂಬಾರ್ ಪಾತ್ರೆಗೆ ಬಿದಿದ್ದಳು. ನವೆಂಬರ್ 16 ರಂದು ಈ ಘಟನೆ ನಡೆದಿತ್ತು. ಶೇಕಡ 50 ಕ್ಕಿಂತ ಹೆಚ್ಚು ದೇಹ ಸುಟ್ಟು ನರಕಯಾತನೆ ಅನುಭವಿಸಿದ್ದಳು. ತಕ್ಷಣ ಕಲಬುರಗಿ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಹೆಚ್ಚುವರಿ ಚಿಕಿತ್ಸೆಗಾಗಿ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಕೋಲಿ ಸಮಾಜದ ಮುಖಂಡರು ಒತ್ತಡ ಹೇರಿದ ಹಿನ್ನೆಲೆ ಸರ್ಕಾರದಿಂದ ಹೆಚ್ಚುವರಿ ಚಿಕತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ನಾಲ್ಕು ದಿನಗಳವರೆಗೆ ಜೀವನ್ಮರಣದ ನಡುವೆ ಹೋರಾಟ ನಡೆಸಿ, ಚಿಕಿತ್ಸೆ ಫಲಿಸದೇ ಭಾನುವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.
ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಆಂಬ್ಯುಲೆನ್ಸ್ ಮುಖಾಂತರ ಪಾರ್ಥಿವ ಶರೀರವನ್ನು ಆಕೆಯ ಹುಟ್ಟೂರು ಚಿಣಮಗೇರಿಗೆ ತರಲಾಗಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇಂದು ನಸುಕಿನ ಜಾವ ಮೂರು ಗಂಟೆ ಸುಮಾರಿಗೆ ಮೃತದೇಹವನ್ನು ಸ್ವಗ್ರಾಮಕ್ಕೆ ತರಲಾಗಿದೆ. ಇತ್ತ ಸಭೆಗಳ ಮೇಲೆ ಸಭೆ ಮಾಡಿ ಅಫಜಲಪುರ ಶಾಸಕರ ಮೇಲೆ ಒತ್ತಡ ತಂದ ಕೋಲಿ ಕಬ್ಬಲಿಗ ಸಮಾಜದ ಮುಖಂಡರು, ಮೃತ ಬಾಲಕಿ ಕುಟುಂಬ ಕಡುಬಡವರಾಗಿದ್ದಾರೆ. ತಕ್ಷಣ ಒಂದು ಕೋಟಿ ರೂಪಾಯಿಗಳ ಪರಿಹಾರ, ಬಾಲಕಿ ತಾಯಿಗೆ ಸರ್ಕಾರಿ ನೌಕರಿ, ಬಾಲಕಿ ತಮ್ಮನ ಶಿಕ್ಷಣದ ಜವಾಬ್ದಾರಿ ಸೇರಿ ಐದು ಬೇಡಿಕೆ ಈಡೆರೀಕೆಗಾಗಿ ಪಟ್ಟು ಹಿಡಿದಿದ್ದರು. ಶಾಸಕ ಎಂವೈ ಪಾಟೀಲ್ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು, ಬೇಡಿಕೆ ಈಡೇರಿಸಲು ಪ್ರಯುತ್ನ ಪಡುವುದಾಗಿ ಹೇಳಿದ್ದಾರೆ.