ಕಲಬುರಗಿ:ತನ್ನ ಪತಿ ಮೃತರಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಕೇವಲ ಎರಡೇ ದಿನದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಉದ್ಯೋಗ ನೀಡಿ, ಕುಟುಂಬದ ನೆರವಿಗೆ ನಿಂತಿದ್ದಾರೆ.
ಕಲಬುರಗಿ ತಾಲೂಕಿನ ಕುಸನೂರಿನ ಶಿವಲಿಂಗಮ್ಮ ದಿ. ಮಾಳಿಂಗರಾಯ ನೌಕರಿ ಪಡೆದವರು. ನೂತನ ಜಿಲ್ಲಾಧಿಕಾರಿಯಾಗಿ ಜನವರಿ 25ರಂದು ಯಶವಂತ ಗುರುಕರ್ ಅವರು ಅಧಿಕಾರ ಸ್ವಿಕಾರ ಮಾಡಿದ್ದಾರೆ. ಅಂದು ಕಚೇರಿ ಮುಂದೆ ಇಬ್ಬರು ಮಕ್ಕಳೊಂದಿಗೆ ಕಾದು ಕುಳಿತಿದ್ದ ಮಹಿಳೆಯನ್ನು ಗಮನಿಸಿದ ಜಿಲ್ಲಾಧಿಕಾರಿ ಗುರುಕರ್, ಸ್ವತಃ ತಾವೇ ಮಹಿಳೆಯ ಬಳಿ ತೆರಳಿ ಸಮಸ್ಯೆ ಆಲಿಸಿದ್ದರು.
ತನ್ನ ಗಂಡ ಆಳಂದ ತಾಲೂಕಿನ ಖಜೂರಿ ನಾಡಾ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಕರ್ತವ್ಯದಲ್ಲಿದ್ದಾಗ 2021ರ ಮಾರ್ಚ್ 16ರಂದು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅನುಕಂಪ ಆಧಾರದ ಮೇಲೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ಅವಲತ್ತುಕೊಂಡಿದ್ದರು.