ಕಲಬುರಗಿ :ಇತ್ತೀಚಿಗೆ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರಾಕ್ಟರ್ ಹರಿಸಿದ್ದರಿಂದ ಹತ್ಯೆಗೀಡಾಗಿದ್ದ ನೆಲೋಗಿ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಮಯೂರ ಅವರ ಕುಟುಂಬಸ್ಥರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚವಡಾಪುರ ತಾಂಡಾದ ನಿವಾಸದಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರೂ. 1 ಲಕ್ಷ ಪರಿಹಾರದ ಚೆಕ್ ವಿತರಿಸಿದರು.
ಸರ್ಕಾರದ ವತಿಯಿಂದ 30 ಲಕ್ಷ ರೂ. ಪರಿಹಾರ, ಮೃತ ಮಯೂರ ಅವರ ಸಂಬಳ ಹಾಗೂ ಇತರೆ ಸೌಲಭ್ಯ ಸೇರಿದಂತೆ ರೂ. 40 ಲಕ್ಷ ರೂ. ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮತ್ತು ಕುಟುಂಬ ವರ್ಗದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಅಭಯ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಈ ಹಿಂದಿನ ಸರ್ಕಾರದಲ್ಲಿ ನೇಮಕವಾದ ಅಧಿಕಾರಿಗಳು ಅಕ್ರಮ ಮರಳು ಸಾಗಾಣಿಕೆ, ಜೂಜು ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ತನಿಖೆ ನಡೆಸಿ ಅಂತವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಮರಳು ಸಾಗಾಣಿಕೆ ಮಾಡುವವರು ರಾಜಕೀಯ ಪಕ್ಷಗಳ ಜೊತೆ ನಂಟು ಹೊಂದಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಪ್ರಕರಣದಲ್ಲಿ ಬಂಧಿಸಲಾದ ಆರೋಪಿ ಯಾವ ಪಕ್ಷದ ನಾಯಕರೊಂದಿಗೆ ಇದ್ದಾನೆಯೋ ಅವರೇ ಈಗ ಉತ್ತರಿಸಲಿ ಎಂದು ಹೇಳಿದರು.