ಕಲಬುರಗಿ:ಸರ್ಕಾರಿ ವೈದ್ಯರೊಬ್ಬರು ಮಾಡಿರುವ ಎಡವಟ್ಟಿನಿಂದ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿದೆ. ಸಂತಾನ ಹರಣ ಚಿಕಿತ್ಸೆ ಬಳಿಕವೂ ಮಗುವಾಗಿದ್ದು, ಇದೀಗ ಆ ಬಡ ಕುಟುಂಬ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕ್ತಿದೆ.
ಜಿಲ್ಲೆಯ ಕಮಲಾಪುರ ತಾಲೂಕಿನ ದಸ್ತಾಪುರ ಗ್ರಾಮದ ನಿವಾಸಿಗಳಾದ ಅಂಬಿಕಾ ಮತ್ತು ಗುರುಶಾಂತಪ್ಪ ಅವರದ್ದು, ಕಡು ಬಡತನದ ಕುಟುಂಬ. ಮೂವರು ಮಕ್ಕಳು ಸಾಕು ಅಂತಾ ಕಮಲಾಪುರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ರು.
ಕಲಬುರಗಿಯಲ್ಲಿ ಸಂತಾನ ಹರಣ ಚಿಕಿತ್ಸೆ ಬಳಿಕವೂ ಮಗು ಜನನ ಕಳೆದ ವರ್ಷ ಅಂದರೆ 19-02-2021 ರಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದ್ರು. ಆದ್ರೆ ವೈದ್ಯರ ಎಡವಟ್ಟಿನಿಂದ ಆಪರೇಷನ್ ಬಳಿಕವೂ 12-10-2021 ರಂದು ಮತ್ತೊಂದು ಗಂಡು ಮಗು ಜನಿಸಿದೆ. ಆಪರೇಷನ್ ಮಾಡಿದ ಬಳಿಕ ಸರ್ಟಿಫಿಕೇಟ್ ನೀಡಬೇಕು, ಅಲ್ಲದೆ 600 ರೂ. ಪ್ರೋತ್ಸಾಹಧನ ಕೂಡ ಕೊಡಬೇಕು. ಆದ್ರೆ ಅದ್ಯಾವುದನ್ನು ಆಸ್ಪತ್ರೆಯ ವೈದ್ಯರು ನೀಡಿಲ್ಲವಂತೆ. ಕಾರಣ ಈ ಯೋಜನೆಯ ಲಾಭ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ತಾಯಂದಿರಿಗೆ ಸಿಗುವುದಿಲ್ಲ.
ಮಕ್ಕಳನ್ನು ಸಾಕೋದೇ ಚಿಂತೆ.. ಆದ್ರೆ ವೈದ್ಯರು ಮಾಡಿರೋ ಈ ಎಡವಟ್ಟಿನಿಂದ ಈ ಬಡ ಕುಟುಂಬ ನಾಲ್ಕು ಮಕ್ಕಳನ್ನು ಸಾಕೋದು ಹೇಗೆ ಅನ್ನೋ ಚಿಂತೆಯಲ್ಲಿ ಮುಳುಗಿದೆ. ಇದೀಗ ಎಡವಟ್ಟು ಮಾಡಿರೋ ವೈದ್ಯರ ವಿರುದ್ಧ ಅಂಬಿಕಾ ಕುಟುಂಬಸ್ಥರು ಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ:15 ಸಚಿವರನ್ನ ಕ್ಯಾಬಿನೆಟ್ನಿಂದ ಕೈಬಿಡಬೇಕು.. ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಲು ಮುಂದಾದ ರೇಣುಕಾಚಾರ್ಯ
ಪುಟ್ಟ ಗುಡಿಸಲಿನಲ್ಲಿರುವ ಅಂಬಿಕಾ ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುತ್ತಿತ್ತು. ಸಂತಾನ ಹರಣ ಆಪರೇಷನ್ ಫೇಲ್ ಬಗ್ಗೆ ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನ ಕೇಳಿದ್ರೆ ಉಡಾಫೆ ಉತ್ತರ ನೀಡುತ್ತಿದ್ದಾರಂತೆ. ಒಟ್ಟಾರೆ ಮಗು ಜನಿಸಿದ ಬಳಿಕ ಖುಷಿಯಲ್ಲಿರಬೇಕಿದ್ದ ಕುಟುಂಬಸ್ಥರು ಹೆಚ್ಚು ಮಕ್ಕಳಾಗಿದ್ದಕ್ಕೆ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ