ತೂಕ ಹೆಚ್ಚಳಕ್ಕೆ ಕಬ್ಬಿಣದ ಕಲ್ಲು ಇಟ್ಟುಕೊಂಡು ಸಿಕ್ಕಿಬಿದ್ದ ಚಾಲಾಕಿಗಳು ಕಲಬುರಗಿ :ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಿಂದ ಸುದ್ದಿಯಾಗಿದ್ದ ಕಲಬುರಗಿ ಜಿಲ್ಲೆಯಲ್ಲಿ ಇದೀಗ ಕೆಕೆಆರ್‌ಟಿಸಿ ನೇಮಕಾತಿಗಾಗಿ ಕೆಲವು ಅಭ್ಯರ್ಥಿಗಳು ಅಕ್ರಮ ಎಸಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ತೂಕ ಹೆಚ್ಚಳಕ್ಕಾಗಿ ಒಳ ಉಡುಪಿನಲ್ಲಿ ಕಬ್ಬಿಣದ ಕಲ್ಲುಗಳನ್ನು ಇಟ್ಟುಕೊಂಡು ನೇಮಕಾತಿ ಪರೀಕ್ಷೆಗೆ ಹಾಜರಾಗಿರುವುದು ಪತ್ತೆಯಾಗಿದೆ.
ತೂಕ ಹೆಚ್ಚಿಸಿಕೊಳ್ಳಲು ಖತರ್ನಾಕ್ ಪ್ಲಾನ್.. ಹೌದು, ನೇಮಕಾತಿಗೆ ನಿರ್ದಿಷ್ಟ ತೂಕ ನಿಗದಿ ಮಾಡಲಾಗಿದೆ. ಅಗತ್ಯ ತೂಕ ಇಲ್ಲದ ನಾಲ್ವರು ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತು ಮಾಡಿ ಅಕ್ರಮವಾಗಿ ತೂಕ ಹೆಚ್ಚಿಸಿಕೊಳ್ಳುವ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾರೆ.
ವಾಮಮಾರ್ಗದಿಂದ ಇಕ್ಕಟ್ಟಿಗೆ ಸಿಲುಕಿದ ಅಭ್ಯರ್ಥಿಗಳು.. ಕೆಕೆಆರ್‌ಟಿಸಿಯಲ್ಲಿ ಚಾಲಕ ಕಂ ನಿರ್ವಾಹಕ ಹುದ್ದೆ ಭರ್ತಿಗೆ ಅರ್ಜಿ ಕರೆಯಲಾಗಿದ್ದು, ಕಲಬುರಗಿಯಲ್ಲಿ ದೈಹಿಕ ಪರೀಕ್ಷೆ ಮಾಡಲಾಗುತ್ತಿದೆ. ಒಟ್ಟು 1,619 ಹುದ್ದೆಗಳಿಗೆ ರಾಜ್ಯದ ಹಲವೆಡೆಯಿಂದ 38 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ನಿರ್ದಿಷ್ಟವಾದ ಎತ್ತರ, 55 ಕೆ.ಜಿ ದೇಹದ ತೂಕ ಕಡ್ಡಾಯವಾಗಿದೆ. ಆದ್ರೆ ಎತ್ತರದಲ್ಲಿ ಅರ್ಹರಾಗಿ ತೂಕದಲ್ಲಿ ಕಡಿಮೆ ಆಗುವ ಅಭ್ಯರ್ಥಿಗಳು ವಾಮ ಮಾರ್ಗದ ಮೂಲಕ ಅಕ್ರಮ ಎಸಗಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಓರ್ವ ಅಭ್ಯರ್ಥಿ ಒಳ ಉಡುಪಿನಲ್ಲಿತ್ತು 5 ಕೆಜಿ ತೂಕದ ಕಲ್ಲು..ಓರ್ವ ಅಂಡರ್ ವೇರ್‌ನಲ್ಲಿ ಐದು ಕೆಜಿಯ ಎರಡು ಕಬ್ಬಿಣದ ಕಲ್ಲು ಗಟ್ಟಿಯಾಗಿ ಕಟ್ಟಿಕೊಂಡಿದ್ದಾನೆ. ಮತ್ತೊಬ್ಬ ಕಬ್ಬಿಣದ ಸರಪಳಿಯನ್ನು ಬೆಲ್ಟ್ ರೀತಿಯಲ್ಲಿ ಟೊಂಕಕ್ಕೆ ಕಟ್ಟಿಕೊಂಡಿದ್ದಾನೆ. ಇನ್ನೊಬ್ಬ ಕಬ್ಬಿಣದ ಭಾರವಾದ ಸಲಾಕೆಗಳನ್ನು ಕಾಲಿಗೆ ಕಟ್ಟಿಕೊಂಡಿದ್ದಾನೆ. ಒಬ್ಬನಂತೂ ಅಕ್ರಮ ಎಸಗಲು ವಿಶೇಷ ವಿನ್ಯಾಸದ ಶರ್ಟ್ ಹೊಲಿಸಿದ್ದಾನೆ. ಶರ್ಟ್ ಎರಡು ಭಾಗದಲ್ಲಿ 5 ಕೆಜಿ ಭಾರದ ಎರಡು ಕಬ್ಬಿಣದ ಪಟ್ಟಿಗಳನ್ನು ಇಟ್ಟು ಶರ್ಟ್ ಸ್ಟಿಚ್ ಮಾಡಿಸಿದ್ದು, ಯಾರಿಗೂ ಅನುಮಾನ ಬಾರದಂತೆ ಅಕ್ರಮ ಎಸಗಲು ಪ್ಲಾನ್ ಹಾಕಿದ್ದರು.
ಅಧಿಕಾರಿಗಳಿಂದ ಕಟ್ಟುನಿಟ್ಟಿನ ತಪಾಸಣೆ..ಅಭ್ಯರ್ಥಿಗಳು ಅಕ್ರಮ ಎಸಗಲು ಚಾಪೆ ಕೆಳಗೆ ನುಗ್ಗಿದರೆ ಅಧಿಕಾರಿಗಳು ರಂಗೋಲಿ ಕೆಳಗೆ ನುಗ್ಗಿದಂತೆ ಪರಿಶೀಲನೆ ನಡೆಸಿದ್ದಾರೆ. ಅಕ್ರಮದ ಹಾದಿ ಮೂಲಕ ನೌಕರಿ ಗಿಟ್ಟಿಸಿಕೊಳ್ಳಲು ಮಾಡಬಾರದ ಕಸರತ್ತು ಮಾಡಿದ ಅಭ್ಯರ್ಥಿಗಳು ಕಡೆಗೂ ಕೆಕೆಆರ್‌ಟಿಸಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಭಾರಿ ಕಟ್ಟುನಿಟ್ಟಿನ ಕ್ರಮಗಳ ಮೂಲಕ ದೈಹಿಕ ಪರೀಕ್ಷೆ ನಡೆಸಿದ ಅಧಿಕಾರಿಗಳು ಅಕ್ರಮ ಎಸಗುವವರ ಕೃತ್ಯ ಬಯಲಿಗೆಳೆದಿದ್ದಾರೆ. ಸಿಕ್ಕಿಬಿದ್ದವರನ್ನು ನೇಮಕಾತಿ ಆಯ್ಕೆ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಮುಂದೆಂದೂ ಇವರು ಕೆಕೆಆರ್‌ಟಿಸಿ ನಡೆಸುವ ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗುವಂತಿಲ್ಲ, ಮೊದಲ ಹಂತದಲ್ಲಿಯೇ ಸಿಕ್ಕಿಬಿದ್ದಿದ್ದು, ಇನ್ನೂ ನೇಮಕಾತಿ ಆಗದ ಹಿನ್ನೆಲೆ ಮಾನವೀಯತೆ ಆಧಾರದ ಮೇಲೆ ದೂರು ದಾಖಲಿಸದೆ ಖಡಕ್ ಎಚ್ಚರಿಕೆ ನೀಡಿ ಹೊರಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂದು ಬ್ಲೂಟೂತ್, ಇಂದು ಕಬ್ಬಿಣದ ಕಲ್ಲು.. ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಬ್ಲೂಟೂತ್ ಹಗರಣದ ಕೇಂದ್ರ ಬಿಂದು ಆಗಿತ್ತು. ಕೆಕೆಆರ್‌ಟಿಸಿ ಪರೀಕ್ಷೆ ಅಕ್ರಮದಲ್ಲಿ ಕಬ್ಬಿಣದ ವಸ್ತುಗಳು ಕೇಂದ್ರ ಬಿಂದುವಾಗಿದೆ.
ಇದನ್ನೂ ಓದಿ :ವಿದ್ಯಾರ್ಥಿಗಳಿಗೆ ಕಳಪೆ ಶೂ ವಿತರಣೆ ಆರೋಪ.. ಮುಖ್ಯೋಪಾಧ್ಯಾಯರು ನಡೆಸಿದ್ದಾರಾ ಕಮಿಷನ್ ದಂಧೆ ?