ಕಲಬುರಗಿ:ನೀನು ನೋಡೊಕೆ ಕಪ್ಪಗಿದಿಯಾ ಎಷ್ಟೇ ಪೌಡರ್ ಹಚ್ಚಿದ್ರು ನೀ ಬೆಳ್ಳಗೆ ಆಗೋದಿಲ್ಲ ಎಂದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಪತಿಯೇ ಪತ್ನಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆಂಬ ಆರೋಪ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಫರ್ಜಾನ ಬೇಗಂ ಕೊಲೆಯಾದ ಮಹಿಳೆ. ಯಾದಗಿರಿ ಜಿಲ್ಲೆಯ ಶಹಾಪುರ ಮೂಲದ 28 ವರ್ಷದ ಫರ್ಜಾನ ಬೇಗಂ, ಕಳೆದ ಏಳು ವರ್ಷಗಳ ಹಿಂದೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೆಲ್ಲೂರ್ ಗ್ರಾಮದ ನಿವಾಸಿ ಖಾಜಾ ಪಟೇಲ್ ಎಂಬುವವನಿಗೆ ಕೈತುಂಬ ವರದಕ್ಷಿಣೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.
ಇವರ ದಾಂಪತ್ಯ ಜೀವನಕ್ಕೆ ಸಾಕ್ಷಿಯೆಂಬಂತೆ ಎರಡು ಮುದ್ದಾದ ಮಕ್ಕಳು ಕೂಡ ಜನಸಿದ್ದವು. ಆದರೆ ಕೆಲ ದಿನಗಳಿಂದ ನೀನು ನೋಡೋಕೆ ಕಪ್ಪಗಿದಿಯಾ. ನೀ ಎಷ್ಟೇ ಪೌಡರ್ ಹಚ್ಚಿದ್ರು ಬೆಳ್ಳಗೆ ಆಗೋದಿಲ್ಲ. ನೀನು ಮನೆಯಲ್ಲಿ ಇರಬೇಕಾದರೆ ಮತ್ತೇ ವರದಕ್ಷಿಣೆ ತಗೊಂಡು ಬಾ ಎಂದು ನಿತ್ಯ ಪತಿ ಖಾಜಾ ಪಟೇಲ್ ಮತ್ತು ಕುಟುಂಬಸ್ಥರು ಫರ್ಜಾನ ಬೇಗಂಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದರಂತೆ. ಆದರೆ ವರದಕ್ಷಿಣೆ ತರದಿದ್ದಕ್ಕೆ ನಿನ್ನೆ ರಾತ್ರಿ ಪತ್ನಿ ಫರ್ಜಾನ ಬೇಗಂನ ಕತ್ತು ಹಿಸುಕಿ ಪತಿ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮದ್ವೆ ಸಂದರ್ಭದಲ್ಲಿ ನಾನು ನಿನ್ನ ಕಪ್ಪು ಮುಖ ನೋಡದೇ ಮದ್ವೆಯಾಗಿ ಮೋಸ ಹೋಗಿದ್ದೇನೆ ಅಂತಾ ಪ್ರತಿದಿನ ಪತ್ನಿ ಫರ್ಜಾನ ಬೇಗಂ ಜೊತೆ ಜಗಳವಾಡುತ್ತಿದ್ದನಂತೆ. ಹೀಗೆ ದಿನವೂ ಪತಿ ಖಾಜಾ ಪಟೇಲ್ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದನಂತೆ. ತಮ್ಮದೇ ಜಮೀನಿನಲ್ಲಿ ಒಕ್ಕಲುತನ ಮಾಡ್ತಿದ್ದ ಖಾಜಾ ಪಟೇಲ್, ಮದ್ವೆಯಾದಾಗಿನಿಂದ ಪತ್ನಿ ಮುಖ ನೋಡಿ ಬೈಯೋದು ಹೊಡೆಯೋದು ಮಾಡುತ್ತಿದ್ದನು ಎಂದು ಆರೋಪಿಸಲಾಗಿದೆ. ಇದರ ಜೊತೆಗೆ ಕುಟುಂಬದವರ ಜೊತೆ ಸೇರಿಕೊಂಡು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಚಿತ್ರಹಿಂಸೆ ಕೊಡುತ್ತಿದ್ದನು ಎಂದು ಹೇಳಲಾಗುತ್ತಿದೆ.
ಕೊಲೆಯಾದ ಫರ್ಜಾನ್ ಬೇಗಂ ತಂದೆ ಆರೋಪ ಏನು?:ಬಡವರಾದರೂ ಸಹ ಮಗಳ ಸುಖವಾಗಿ ಇರಲಿ ಅಂತಾ ಫರ್ಜಾನ ಬೇಗಂ ಸಾಲ-ಶೂಲ ಮಾಡಿಕೊಂಡು ಖಾಜಾ ಪಟೇಲ್ ಜೊತೆ ಅದ್ದೂರಿಯಾಗಿ ಮದ್ವೆ ಮಾಡಿಕೊಟ್ಟಿದ್ದೆವು. ಆದರೆ ವರದಕ್ಷಿಣೆ ತರದಿರೋದಕ್ಕೆ ಮಗಳನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಅಂತಾ ಕೊಲೆಯಾದ ಫರ್ಜಾನ ಬೇಗಂ ತಂದೆ ಖಾಜಾಲಾಲ್ ಆರೋಪ ಮಾಡಿದ್ದಾರೆ. ಘಟನೆ ನಂತರ ಪತಿ ಖಾಜಾ ಪಟೇಲ್ ಹಾಗೂ ಕುಟುಂಬಸ್ಥರು ತೆಲೆ ಮರೆಸಿಕೊಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಜೇವರ್ಗಿ ಠಾಣೆ ಪೊಲೀಸರು ಪರಾರಿಯಾಗಿರೋ ಪತಿ ಖಾಜಾ ಪಟೇಲ್ ಮತ್ತು ಕುಟುಂಬಸ್ಥರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಕೆಲಸದ ವಿಚಾರವಾಗಿ ನಿಂದಿಸುತ್ತಿದ್ದ ಲಾರಿ ಬ್ರೋಕರ್ ಹತ್ಯೆ: ಕಾರ್ಮಿಕರಿಬ್ಬರು ಸೆರೆ