ಕಲಬುರಗಿ:ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಆಹ್ವಾನ ಇಲ್ಲದೇ ನಾನು ಹೇಗೆ ಹೋಗಲಿ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಕಲಬುರಗಿ ಪ್ರವಾಸದಲ್ಲಿರುವ ಅವರು ಮಾಧ್ಯಮದವರ ಜೊತೆ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಇಬ್ಬರು ಒಂದಾಗಿದ್ದಾರೆ ಎಂದು ಪೇಪರ್ನಲ್ಲಿ ನೋಡಿದೆ. ದೇವೇಗೌಡರು ಮತ್ತು ಮೋದಿ ಕೈ ಕೈ ಹಿಡಿದುಕೊಂಡಿರೋದು ನೋಡಿದ್ದೇನೆ. ಅವರಿಬ್ಬರು ಒಂದಾಗುವ ಪ್ರಯತ್ನ ಮಾಡ್ತಿದ್ದಾರೆ. ಎಷ್ಟು ಸೀಟ್ ಅವರು ಕೇಳ್ತಾರೆ ಇವರು ಎಷ್ಟು ಕೊಡ್ತಾರೆ ಅನ್ನೋದು ಇನ್ನೂ ಕ್ಲಿಯರ್ ಆಗಿಲ್ಲ. ಆದರೆ ನಮ್ಮನ್ನು ಯಾರು ಹತ್ತಿಕ್ಕುವುದಕ್ಕೆ ಆಗೋದಿಲ್ಲ. ದೇಶದಲ್ಲಿ 28 ಪಾರ್ಟಿ ಒಂದಾಗಿ ಚುನಾವಣೆ ಎದುರಿಸೋದಕ್ಕೆ ಮುಂದಾಗಿದ್ದೇವೆ. ನಾವು ಶೇ 60ರಷ್ಟು ಮತಗಳನ್ನು ಪಡೆಯಬೇಕು ಎಂದು ಲೆಕ್ಕಾಚಾರ ಇದೆ. ಇಂಡಿಯಾದ ನಾಲ್ಕನೇ ಮೀಟಿಂಗ್ ಕೂಡ ಮಾಡ್ತಿದ್ದೇವೆ. ನಾವೆಲ್ಲ ಒಂದಾಗಿ ಫೈಟ್ ಮಾಡೋದಕ್ಕೆ ಮುಂದಾಗಿದ್ದೇವೆ ಎಂದರು.
ಜೆಡಿಎಸ್ ಐಡಿಯಾಲಜಿ ಚೇಂಜ್ ಮಾಡಿದ್ರೆ ನಾನು ಕಮೆಂಟ್ ಮಾಡೋದಿಲ್ಲ. ಜೆಡಿಎಸ್ ಮೊದಲಿನಿಂದಲೂ ಸೆಕ್ಯೂಲರ್ ಅಂತಾ ಹೇಳ್ತಿದ್ದರು. ನಾನು ರಾಜಕೀಯದಲ್ಲಿ ಧರ್ಮ ತರಲು ಇಷ್ಟ ಪಡುವುದಿಲ್ಲ. ರಾಜಕೀಯ ಹಾದಿಯಲ್ಲಿ ಒಂದಾಗಿ ಪೈಟ್ ಮಾಡ್ತಿದ್ದೇವೆ. ಧರ್ಮದ ವಿಚಾರ ಬಂದಾಗ ಡಿಬೇಟ್ ಮಾಡೋಣ, ಯಾವುದು ಸರಿ, ಯಾವುದು ತಪ್ಪು, ಬಸವಣ್ಣ ಸರಿನೋ ಅಂಬೇಡ್ಕರ್ ಸರಿನೋ, ಎನ್ನುವುದರ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.