ಕಲಬುರಗಿ : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇದೇ ಜೂ. 22 ರಂದು ತಾಲೂಕಿನ ಹೇರೂರ(ಬಿ) ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ಹಿನ್ನೆಲೆ ಯಾವುದೇ ಲೋಪವಾಗದಂತೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಇಲಾಖಾವಾರು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನತಾ ದರ್ಶನ ಕಾರ್ಯಕ್ರಮ ಮುಖ್ಯಮಂತ್ರಿಗಳ ಇಷ್ಟದ ಕಾರ್ಯಕ್ರಮವಾಗಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಇದೊಂದು ಮಹತ್ವದ್ದಾಗಿದೆ. ಸುಮಾರು 8-10 ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಮಳೆ ಬಂದರೂ, ಯಾವುದೇ ತೊಂದರೆಯಾಗದಂತೆ ಜನತಾ ದರ್ಶನ ನಡೆಯುವ ಕಾರ್ಯಕ್ರಮ ಸ್ಥಳವನ್ನು ವಾಟರ್ ಪ್ರೂಪ್ ವ್ಯವಸ್ಥೆಯಿಂದ ನಿರ್ಮಿಸಲಾಗಿದೆ. ಜೊತೆಗೆ ಬಂದಂತಹ ಅರ್ಜಿದಾರರು ಬಿಸಿಲಿನಿಂದ ಪರಿತಪಿಸದಂತೆ ಪಕ್ಕದಲ್ಲೇ ವಿಶಾಲವಾದ ಶಾಮಿಯಾನ ಕೂಡ ಹಾಕಲಾಗಿದೆ. ಸಾರ್ವಜನಿಕರ ವಾಹನಗಳು ಹಾಗೂ ಗಣ್ಯರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿದೆ. ನಿಗದಿತ ಸ್ಥಳಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳ ನಿಲುಗಡೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗಾಗಿ 50 ಕಡೆ ಊಟದ ಸ್ಟಾಲ್ ವ್ಯವಸ್ಥೆ ಮಾಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಎಂಜಿನಿಯರ್ ಅವರಿಗೆ ಸೂಚಿಸಿದರು. ವಿಕಲಚೇತನರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದ್ದು, ಮುಖ್ಯಮಂತ್ರಿಗಳ ಭೇಟಿಗೂ ಇವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. 20ಕ್ಕೂ ಹೆಚ್ಚು ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇಲಾಖಾವಾರು ಸುಮಾರು 40 ವಸ್ತು ಪ್ರದರ್ಶನ ಮಳಿಗೆ ತೆರೆಯಲಾಗುತ್ತಿದ್ದು, ಇವುಗಳ ಮೂಲಕ ಸಾರ್ವಜನಿಕರಿಗೆ ಆಯಾ ಇಲಾಖೆಗಳಲ್ಲಿ ಇರುವ ಸರ್ಕಾರಿ ಯೋಜನೆಗಳು, ಸೌಲಭ್ಯಗಳು ಹಾಗೂ ಅರ್ಜಿ ಸಲ್ಲಿಕೆ ವಿಧಾನ ಮುಂತಾದವುಗಳ ಬಗ್ಗೆ ಸ್ಥಳದಲ್ಲೇ ಮಾಹಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.