ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಸಿಎಂ ಗ್ರಾಮ ಗ್ರಾಮವಾಸ್ತವ್ಯ: ಮಧುವಣಗಿತ್ತಿಯಂತೆ ಸಿಂಗಾರಗೊಂಡ ಹೇರೂರು ಶಾಲೆ!

ನಾಳೆ ಕಲಬುರಗಿ ಜಿಲ್ಲೆಯ ಹೇರೂರು ಗ್ರಾಮದಲ್ಲಿ ಸಿಎಂ ಗ್ರಾಮವಾಸ್ತವ್ಯ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಸಿಎಂ ಗ್ರಾಮವಾಸ್ತವ್ಯಕ್ಕೆ ಸಕಲ ಸಿದ್ಧತೆ

By

Published : Jun 21, 2019, 7:29 PM IST

ಕಲಬುರಗಿ: ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯಕ್ಕಾಗಿ ಕಲಬುರಗಿ ಜಿಲ್ಲೆ ಅಫಜಲಪುರ ಕ್ಷೇತ್ರದಲ್ಲಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೇರೂರು ಗ್ರಾಮಕ್ಕೆ ಆಗಮಿಸಲಿದ್ದು,ರಾತ್ರಿ ಇಲ್ಲಿಯೇ ತಂಗಲಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಕಲಬುರಗಿ ಜಿಲ್ಲೆ ಅಫಜಲಪುರ ಕ್ಷೇತ್ರದ ಹೇರೂರು(ಬಿ) ಗ್ರಾಮದಲ್ಲಿ ಜೂನ್ 22 ರಂದು ವಾಸ್ತವ್ಯ ಮಾಡಲಿದ್ದಾರೆ. ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಕೈಗೊಂಡ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ವಾಸ್ತವ್ಯ ಮಾಡಲಿರುವ ಶಾಲೆಗೆ ಬಣ್ಣ ಹಚ್ಚಿ, ಕಾಂಪೌಂಡ್ ಗೋಡೆ ನಿರ್ಮಿಸಿ, ಶೌಚಾಲಯ, ಬಾತ್ ರೂಮ್ ವ್ಯವಸ್ಥೆ ಹಾಗು ಶಾಲೆಗೆ ಹೊಸ ಬೆಂಚುಗಳು ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡಲಾಗಿದೆ.

ಮುಖ್ಯಮಂತ್ರಿಗಳ ಸ್ವಾಗತಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ಸುಕರಾಗಿ ಕಾದು ನೋಡುತ್ತಿದ್ದಾರೆ. ಅವರು ನಮ್ಮ ಶಾಲೆಗೆ ಭೇಟಿ ನೀಡುತ್ತಿರುವುದೇ ನಮ್ಮ ಸೌಭಾಗ್ಯ. ಸಿಎಂ ಸ್ವಾಗತಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ತಿಳಿಸಿದ್ದಾರೆ.

ಇನ್ನು,ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಹೇರೂರು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಭದ್ರತೆಗಾಗಿ ಮುನ್ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸಿಎಂ ಗ್ರಾಮವಾಸ್ತವ್ಯಕ್ಕೆ ಸಕಲ ಸಿದ್ಧತೆ

ಕಾರ್ಯಕ್ರಮದ ವಿವರ:

ಬೆಳಿಗ್ಗೆ 10 ಗಂಟೆಗೆ ಹೇರೂರು ಗ್ರಾಮಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಜೆ 5 ಗಂಟೆವರೆಗೂ ಜನತಾ ದರ್ಶನ ಮಾಡಲಿದ್ದಾರೆ. ಜೋಗೂರು ರಸ್ತೆಯಲ್ಲಿ ಇದಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಅಧಿಕಾರಿಗಳು ಮತ್ತು ಜನರು ಕೂರಲು ಸುಮಾರು 10 ಸಾವಿರ ಆಸನದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ. ಅಲ್ಲದೆ ವಿವಿಧ ಇಲಾಖೆಗಳ ಸ್ಟಾಲ್ ಗಳನ್ನೂ ಹಾಕಲಾಗುತ್ತಿದೆ. ಜನತಾ ದರ್ಶನದ ನಂತರ ಶಾಲೆಗೆ ತೆರಳಲಿರುವ ಕುಮಾರಸ್ವಾಮಿ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ನಂತರ ಶಾಲಾ ಮಕ್ಕಳೊಂದಿಗೆ ಸಹ ಪಂಕ್ತಿ ಭೋಜನ ಸೇವಿಸಿ ಶಾಲೆಯಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.

ABOUT THE AUTHOR

...view details