ಕರ್ನಾಟಕ

karnataka

ETV Bharat / state

"ಕರ್ನಾಟಕ A ಟೀಂ ತಮಿಳುನಾಡು B ಟೀಂ": ಕಾಂಗ್ರೆಸ್​ ವಿರುದ್ಧ ಹೆಚ್​ ಡಿ ರೇವಣ್ಣ ವಾಗ್ದಾಳಿ - ಸಾಮೂಹಿಕ ರಾಜೀನಾಮೆ

ಕಲಬುರಗಿಯಲ್ಲಿ ಮಾಜಿ‌ ಸಚಿವ ಹೆಚ್​ ​ಡಿ ರೇವಣ್ಣ ಅವರು ರಾಜ್ಯ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

ಮಾಜಿ‌ ಸಚಿವ ಹೆಚ್​.​ಡಿ. ರೇವಣ್ಣ
ಮಾಜಿ‌ ಸಚಿವ ಹೆಚ್​.​ಡಿ. ರೇವಣ್ಣ

By ETV Bharat Karnataka Team

Published : Sep 28, 2023, 2:59 PM IST

ಹೆಚ್​ ಡಿ ರೇವಣ್ಣ

ಕಲಬುರಗಿ:ಇಂಡಿಯಾ ಒಕ್ಕೂಟ ಉಳಿಸಿಕೊಳ್ಳಲು ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡು, ಕರ್ನಾಟಕ ಸೇರಿ 40 ಸೀಟು ಗೆಲ್ಲುವುದೇ ಕಾಂಗ್ರೆಸ್​​ ಗುರಿ. ಹೀಗಾಗಿ ರಾಜ್ಯದ ಹಿತ ಅಡವಿಡುತ್ತಿದ್ದಾರೆ ಎಂದು ಕಲಬುರಗಿಯಲ್ಲಿ ಮಾಜಿ‌ ಸಚಿವ ಹೆಚ್​ ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ವಿಚಾರ‌ವಾಗಿ ಇಲ್ಲಿನ ಏರ್​ಪೋರ್ಟ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮಿಳುನಾಡು, ಕರ್ನಾಟಕ ಸೇರಿ 40 ಸೀಟು ಗೆಲ್ಲುವ ಪ್ರಯಾಸದಲ್ಲಿ ಕಾವೇರಿ ಭಾಗದ ಅಚ್ಚುಕಟ್ಟು ರೈತರನ್ನು ವಂಚಿಸುತ್ತಿದ್ದಾರೆ. ರಾಜ್ಯದ ಹಿತ ದೃಷ್ಠಿಯಿಂದ ನಾಳೆ ಕರೆ ನೀಡಲಾದ ಬಂದ್ ಗೆ ಬೆಂಬಲ ನೀಡುವುದಾಗಿ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್​ನಿಂದ ಮತ್ತೆ ಆಪರೇಷನ್ ಹಸ್ತ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರೇವಣ್ಣ, ಆಪರೇಷನ್ ಬಗ್ಗೆ ತಲೆ‌ಕಡೆಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. 1991 ರಿಂದ ರಾಜಕೀಯ ನೋಡುತ್ತಾ ಬಂದಿದ್ದೇನೆ. ಆಪರೇಷನ್ ಹಸ್ತಕ್ಕೆ ಹೆದರುವ ಸನ್ನಿವೇಶ ನಮಗಿಲ್ಲ, 135 ಸೀಟು ಗೆದ್ದರೂ ಕಾಂಗ್ರೆಸ್ ಪಕ್ಷಕ್ಕೆ ಆಪರೇಷನ್ ಹಸ್ತ ಮಾಡುವ ಪರಿಸ್ಥಿತಿ‌ ಬಂದಿದೆ. ಹಿಂದೆ ಬಿಜೆಪಿ ಹಾಗೂ ಜೆಡಿಎಸ್ A ಟೀಂ B ಟೀಂ ಎಂದು ಕಾಂಗ್ರೆಸ್​ನವರು ಹೇಳುತ್ತಿದ್ದರು. ಈಗ ಕರ್ನಾಟಕ A ಟೀಂ ತಮಿಳುನಾಡು B ಟೀಂ ಆಗಿದೆ ಅಂತ ಟೀಕಿಸಿದರು.

ಕಾಂಗ್ರೆಸ್​ ಇಂದು ಕೋಮುವಾದಿಗಳನ್ನು ದೂರ ಇಡಬೇಕು ಎನ್ನುತ್ತದೆ. ಈ ಹಿಂದೆ ಕಾಂಗ್ರೆಸ್​ ನಮ್ಮನ್ನು ಯಾವ ರೀತಿ‌ ನಡೆಸಿಕೊಂಡರು‌ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಸದ್ಯ ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ನಮ್ಮಲ್ಲಿ ಯಾವುದೇ ಗೊಂದಲ, ಅಸಮಾಧಾನ ಇಲ್ಲ. ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು, ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ‌ ಅವರು ಏನು ಹೇಳುತ್ತಾರೋ ಅದೇ ಫೈನಲ್ ಅಂತ ಮೈತ್ರಿಯನ್ನು ರೇವಣ್ಣ ಸಮರ್ಥಿಸಿಕೊಂಡರು. ಜೆಡಿಎಸ್ ಪಕ್ಷ ಬಿಟ್ಟು ಯಾರು ಎಲ್ಲೂ ಹೋಗೋದಿಲ್ಲ, ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಎಲ್ಲರೂ ಕುಳಿತೆ ಮಾಡಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ‌ ಇಬ್ರಾಹಿಂ ಕೂಡಾ ಎಲ್ಲೂ ಹೋಗಲ್ಲ ಎಂದು ಹೆಚ್​ ಡಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಸಾಮೂಹಿಕ ರಾಜೀನಾಮೆ:ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ನೂರಾರು ಪದಾಧಿಕಾರಿಗಳು, ಕಾರ್ಯಕರ್ತರು ಬುಧವಾರ ಮೈಸೂರಿನಲ್ಲಿ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಮೈಸೂರು ನಗರದ ನರಸಿಂಹರಾಜ ಕ್ಷೇತ್ರದ 2023 ರ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಮತ್ತು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಶಾಹಿದ್ ನೇತೃತ್ವದಲ್ಲಿ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸಾಮೂಹಿಕ ರಾಜೀನಾಮೆ

ಮೈಸೂರಿನಿಂದ ರಾಜೀನಾಮೆ ಪತ್ರವನ್ನು ಪಕ್ಷಕ್ಕೆ ಅಂಚೆ ಮೂಲಕ ಕಳುಹಿಸಿದ್ದಾರೆ. ಜಾತ್ಯತೀತ ಪಕ್ಷ ಎಂದು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದೆವು. ಆದರೆ ಕೋಮುವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವುದು ಸರಿಯಲ್ಲ. ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಕೋಮು ಸೌಹಾರ್ದತೆ ಹಾಳು ಮಾಡುವ ಕೆಲಸಗಳಾಗಿವೆ. ಕುಮಾರಸ್ವಾಮಿ ಹಾಗೂ ನಿಖಿಲ್​ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಸಿ ಎಂ ಇಬ್ರಾಹಿಂ ಅವರಿಗೆ ಮನವಿ ಮಾಡಿದೆವು. ಆದರೆ ಅವರು ನಮಗೆ ಸ್ಪಂದಿಸದ ಕಾರಣ ನಾವು ಸಾಮೂಹಿಕವಾಗಿ ಇಂದು ಮೈಸೂರಿನಿಂದ ರಾಜೀನಾಮೆ ಪರ್ವ ಶುರು ಮಾಡಿದ್ದೇವೆ ಎಂದು ಶಾಹಿದ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ: ನರಸಿಂಹರಾಜ ಕ್ಷೇತ್ರದ ನೂರಕ್ಕೂ ಹೆಚ್ಚು ಜೆಡಿಎಸ್ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ

ABOUT THE AUTHOR

...view details