ಕಲಬುರಗಿ:ಪಿಎಸ್ಐ ನೇಮಕಾತಿ ಪರೀಕ್ಷಾ ಹಗರಣದಿಂದ ದೇಶಾದ್ಯಂತ ಸುದ್ದಿಯಾಗಿದ್ದ ಕಲಬುರಗಿ ಈಗ ಮತ್ತೊಂದು ಅಕ್ರಮ ಬಯಲಾಗುವ ಮೂಲಕ ಮುನ್ನಲೆಗೆ ಬಂದಿದೆ. ಗುಲ್ಬರ್ಗಾವಿಶ್ವವಿದ್ಯಾಲಯ ಸಹ ಸದಾ ಒಂದಿಲ್ಲವೊಂದು ವಿವಾದಗಳಿಂದಲೇ ಸುದ್ದಿಯಾಗುತ್ತದೆ. ಇದೀಗ ಆ ವಿಶ್ವವಿದ್ಯಾಲಯದ ನೌಕರರು ವಿದ್ಯಾರ್ಥಿಯೊಬ್ಬರಿಂದ ಹಣ ಪಡೆದು ನಕಲಿ ಅಂಕಪಟ್ಟಿ ನೀಡಿರುವ ಪ್ರಕರಣ ಬಯಲಿಗೆ ಬಂದಿದೆ.
ಹೌದು, ಗುವಿವಿಯ ಮೌಲ್ಯಮಾಪನ ಸಿಬ್ಬಂದಿಯೊಬ್ಬರು ಬಿ.ಕಾಂ ನಾಲ್ಕನೇ ಸೆಮಿಸ್ಟರ್ ಅನುತ್ತೀರ್ಣ ಆಗಿದ್ದ ವಿದ್ಯಾರ್ಥಿ ನಾಗರಾಜ್ ಎಂಬುವರಿಂದ 30 ಸಾವಿರ ರೂಪಾಯಿ ಹಣ ಪಡೆದು ಪಾಸ್ ಆಗಿರುವ ಮಾರ್ಕ್ಸ್ ಕಾರ್ಡ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿಶ್ವವಿದ್ಯಾಲಯ ತನಿಖೆ ನಡೆಸಲು ಮುಂದಾಗಿದೆ.
ನಗರದ ಅಖಿಲ ಕರ್ನಾಟಕ ಸ್ನೇಹ ಗಂಗಾ ಕಾಲೇಜಿನ ವಿದ್ಯಾರ್ಥಿಯಾದ ನಾಗರಾಜ್, ಬಿ.ಕಾಂ ನಾಲ್ಕನೇ ಸೆಮಿಸ್ಟರ್‌ನಲ್ಲಿ ಫೇಲಾಗಿ, ಐದನೇ ಮತ್ತು ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪಾಸಾಗಿ ಮುಂದೆ ಎಂಎಸ್‌ಡಬ್ಲ್ಯೂ ಕೋರ್ಸ್ ಮಾಡುವುದಕ್ಕಾಗಿ ತಯಾರಿ ನಡೆಸಿದ್ದರು. ಹೀಗಾಗಿ ಫೇಲಾಗಿರುವ ನಾಲ್ಕನೇ ಸೆಮಿಸ್ಟರ್ ಫಲಿತಾಂಶವನ್ನು ಹೇಗಾದರೂ ಮಾಡಿ ಪಾಸ್ ಮಾಡಿಕೊಳ್ಳಬೇಕು ಅಂದುಕೊಂಡಿದ್ದರು. ಅದಕ್ಕಾಗಿ ಅಡ್ಡದಾರಿ ಹಿಡಿದಿದ್ದರು.
ಗುವಿವಿಯಲ್ಲಿ ಮತ್ತೊಂದು ಅಕ್ರಮ: 20 ಸಾವಿರ ರೂ. ಹಣ ಕೊಟ್ಟು ಅಂಕಪಟ್ಟಿ ಪಡೆದ ವಿದ್ಯಾರ್ಥಿಗೆ ಶಾಕ್! ನಂತರ ಮೌಲ್ಯಮಾಪನ ವಿಭಾಗದ ಎಫ್‌ಡಿಎ ಆದ ಸಂಜಯಕುಮಾರ ಕೊಟ್ರೆ ಎಂಬುವವರನ್ನು ನಾಗರಾಜ್ ಭೇಟಿ ಮಾಡಿ ಡೀಲ್ ಮಾಡಲು ಮುಂದಾಗಿದ್ದಾರೆ. ಆಗ 30 ಸಾವಿರ ರೂ. ಹಣ ನೀಡಿದರೆ, ನಾಲ್ಕನೇ ಸೆಮಿಸ್ಟರ್ ಅಂಕಪಟ್ಟಿ ನೀಡುವುದಾಗಿ ಎಫ್‌ಡಿಎ ಹೇಳಿದ್ದರು ಎನ್ನಲಾಗ್ತಿದೆ. ಅದಕ್ಕೆ ಒಪ್ಪಿಕೊಂಡ ವಿದ್ಯಾರ್ಥಿ ನಾಗರಾಜ್, ಮುಂಗಡವಾಗಿ 20 ಸಾವಿರ ರೂ. ಕೊಟ್ಟು ಅಂಕಪಟ್ಟಿ ಪಡೆದುಕೊಂಡಿದ್ದಾರೆ.
ಅಂಕಪಟ್ಟಿ ಕೈಗೆ ಸಿಕ್ಕ ಮೇಲೆ ವಿದ್ಯಾರ್ಥಿಗೆ ಶಾಕ್:ನಂತರ ನಾಗರಾಜ್ ಎಂಎಸ್‌ಡಬ್ಲ್ಯೂ ಪ್ರವೇಶ ಪಡೆಯಲು ಬೇರೊಂದು ಕಾಲೇಜಿಗೆ ಹೋಗಿದ್ದಾರೆ. ಅಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಲೆಂದು ಅಂಕಪಟ್ಟಿಯನ್ನು ವಿಶ್ವವಿದ್ಯಾಲಯಕ್ಕೆ ರವಾನಿಸಲಾಗಿದೆ. ಆದರೆ, ಮೌಲ್ಯಮಾಪನ ವಿಭಾಗದಲ್ಲಿ ನಾಗರಾಜ್ ಪಾಸಾಗಿರುವ ಬಗ್ಗೆ ನಮೂದೇ ಆಗಿಲ್ಲ. ಆಗ ನಾಗರಾಜ್‌ಗೆ ನಕಲಿ ಅಂಕಪಟ್ಟಿ ನೀಡಲಾಗಿದೆ ಎಂಬ ಆಸಲಿ ವಿಷಯ ಗೊತ್ತಾಗಿದೆ. ನಂತರ ಆತನೇ ಇಡೀ ಪ್ರಕರಣವನ್ನು ವಿವರಿಸಿ, ನಕಲಿ ಅಂಕಪಟ್ಟಿ ಕೊಟ್ಟ ಎಫ್‌ಡಿಎ ಸಂಜಯಕುಮಾರ ವಿರುದ್ಧ ಕುಲಪತಿಗಳಿಗೆ ದೂರು ಸಲ್ಲಿಸಿದ್ದಾರೆ.
ನಕಲಿ ಅಂಕಪಟ್ಟಿ ವಿರುದ್ಧ ಕುಲಪತಿಗಳಿಗೆ ಬರೆದ ದೂರಿನ ಪತ್ರ ಸೈಬರ್ ಕ್ರೈಂ ಮೊರೆ-ವಿಸಿ:ಈ ನಕಲಿ ಅಂಕಪಟ್ಟಿ ದಂಧೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಲಪತಿ ಪ್ರೊ.ದಯಾನಂದ ಅಗಸರ್, 2019ರಲ್ಲಿ ವಿದ್ಯಾರ್ಥಿ ನಾಗರಾಜ್ ಬಿ.ಕಾಂ ನಾಲ್ಕನೇ ಸೆಮಿಸ್ಟರ್ ಪಾಸಾಗಲು ಮೌಲ್ಯಮಾಪನ ವಿಭಾಗದ ಎಫ್‌ಡಿಎ ಸಂಜುಗೆ ಹಣ ನೀಡಿದ್ದಾರೆ. 2020ರಲ್ಲಿ ನಾಗರಾಜ್‌ಗೆ ಮಾರ್ಕ್ಸ್‌ಕಾರ್ಡ್ಅನ್ನು ಸಂಜಯಕುಮಾರ ನೀಡಿದ್ದರು. ಆದರೆ, ಆ ಮಾರ್ಕ್ಸ್‌ಕಾರ್ಡ್ ಪರಿಶೀಲನೆ ವೇಳೆ ವಿವಿ ಪೋರ್ಟಲ್‌ನಲ್ಲಿ ಫೇಲ್ ಅಂತಾ ತೋರಿಸಿದೆ. ಹೀಗಾಗಿ ಮೇಲ್ನೋಟಕ್ಕೆ ಎಫ್‌ಡಿಎ ಸಂಜಯಕುಮಾರ ಹಣ ಪಡೆದು ಅಂಕಪಟ್ಟಿ ನೀಡಿರುವುದು ಸಾಬೀತಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಅಲ್ಲದೇ, ಈ ಬಗ್ಗೆ ಮೌಲ್ಯಮಾಪನ ವಿಭಾಗದಲ್ಲಿ ಸೂಕ್ತ ತನಿಖೆ ನಡೆಸಲಾಗುವುದು. ನಕಲಿ ಅಂಕಪಟ್ಟಿ ಕುರಿತು ತನಿಖೆ ನಡೆಸಲು ಸೈಬರ್ ಕ್ರೈಂ ಮೊರೆ ಹೋಗಿರುವುದಾಗಿ ವಿಸಿ ಪ್ರೊ. ದಯಾನಂದ ಅಗಸರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಭ್ರಷ್ಟಾಚಾರದ ಬಗ್ಗೆ ದೂರು : 10 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ