ಕಲಬುರಗಿ: ಮಹಾಮಾರಿ ಕೊರೊನಾ ಭಯದಲ್ಲಿರುವ ಜಿಲ್ಲೆಯ ಜನತೆಗೆ ಇದೀಗ ಜೀವಜಲದ ಸಮಸ್ಯೆ ಎದುರಾಗಿದೆ. ಬಿಸಿಲಿನ ತಾಪ ಹೆಚ್ಚಾಗಿದ್ದು, ಅಂತರ್ಜಲ ಕುಸಿತಗೊಂಡಿದೆ. ಜಿಲ್ಲೆಯ ಆಳಂದ, ಅಫಜಲಪುರ, ಸೇಡಂ, ಚಿಂಚೋಳಿ, ಚಿತ್ತಾಪುರ ಹೀಗೆ ಬಹುತೇಕ ತಾಲೂಕುಗಳಲ್ಲಿ ನೀರಿನ ಸಮಸ್ಯೆ ವಿಪರೀತ ತಲೆದೋರಿದೆ.
ಹನಿ ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಫಜಲಪುರ ತಾಲೂಕಿನಲ್ಲಿ ಮೂರ್ನಾಲ್ಕು ಕಿಲೋ ಮೀಟರ್ ದೂರದ ಹೊಲ-ಗದ್ದೆಗಳಿಗೆ ತೆರಳಿ ನೀರು ತರುತ್ತಿದ್ದಾರೆ. ಜನರ ಈ ಪರಿಸ್ಥಿತಿ ಮನಗಂಡ ಜೆ.ಎಂ. ಕೊರಬು ಫೌಂಡೇಶನ್ ನೀರಿನ ಸಮಸ್ಯೆ ತಪ್ಪಿಸಲು ಟ್ಯಾಂಕರ್ ಮೂಲಕ ಜನರಿಗೆ ಉಚಿತ ನೀರು ಪೂರೈಸುತ್ತಿದೆ.
ಕೊರೊನಾ ವಿರುದ್ಧದ ಹೋರಾಟದ ಜೊತೆಗೆ ಕಲಬುರಗಿಯಲ್ಲಿ ಉಚಿತ ನೀರು ಪೂರೈಕೆ ಅಫಜಲಪುರ ತಾಲೂಕಿನ ಮಾಶ್ಯಾಳ, ಭಿಂಗೊಳ್ಳಿ ತಾಂಡಾ, ಹಳ್ಳಿಗಿ ತಾಂಡಾ, ರಾಜೀವನಗರ ತಾಂಡಾ ಸೇರಿದಂತೆ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ನಿತ್ಯ ನೀರು ಒದಗಿಸುತ್ತಿದೆ. ಎಂಟು ಟ್ಯಾಂಕರ್ ಮೂಲಕ ಪ್ರತಿ ದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ತೀವ್ರ ನೀರಿನ ಸಮಸ್ಯೆ ಇರುವ ಪ್ರತಿ ಗ್ರಾಮಕ್ಕೆ 2-3 ಟ್ಯಾಂಕರ್ ನೀರು ಪೂರೈಸುತ್ತಿದೆ.
ನೀರು ಪೂರೈಸುವುದರ ಜೊತೆಗೆ ಲಾಕ್ಡೌನ್ನಿಂದಾಗಿ ಆಹಾರ ಸಮಸ್ಯೆ ಎದುರಿಸುತ್ತಿರುವ ಬಡ ಜನರಿಗೆ ಕೊರಬು ಫೌಂಡೇಶನ್, ಅಗತ್ಯ ಆಹಾರ ಸಾಮಗ್ರಿ, ಮಾಸ್ಕ್, ಗ್ಲೌಸ್ ವಿತರಣೆ ಮಾಡುತ್ತಿದೆ. ಸರ್ಕಾರಿ ಇಲಾಖೆಗಳು ಮಾಡಬೇಕಾದ ಕೆಲಸವನ್ನು ಸಾಮಾಜಿಕ ಕಳಕಳಿಯಿಂದ ಜೆ.ಎಂ. ಕೊರಬು ಫೌಂಡೇಶನ್ ಮಾಡುತ್ತಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.