ಕಲಬುರಗಿ:ಜೇವರ್ಗಿ ಕಾಂಗ್ರೆಸ್ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ ಅಜಯ್‌ಸಿಂಗ್‌ಗೆ ಬಿಜೆಪಿ ಹಾಗೂ ಆರ್ಎಸ್ಎಸ್ ಮೇಲೆ ಒಲವಿದೆ. ಈ ಹಿಂದೆಯೇ ಬಿಜೆಪಿ ಸೇರಲು ಮುಂದಾಗಿದ್ದರು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೊಸ ಬಾಂಬ್ ಸಿಡಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಶಾಸಕ ಡಾ. ಅಜಯ್‌ಸಿಂಗ್ ಬಿಜೆಪಿ ಬಾಗಿಲು ತಟ್ಟಿದ್ದರು ಎಂದು ಆರೋಪಿಸಿದರು.
ನಾನು ಅಂದು ಕಲಬುರಗಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷನಾಗಿದ್ದೆ. ಅಂದಿನ ಬಿಜೆಪಿ ಉಸ್ತುವಾರಿ ಮುರುಳಿಧರರಾವ್ ಮತ್ತು ರಾಜ್ಯಧ್ಯಕ್ಷರಾಗಿದ್ದ ಬಿ ಎಸ್ ಯಡಿಯೂರಪ್ಪ ನನ್ನ ಜೊತೆ ಮಾತನಾಡಿದ್ದರು. ಡಾ ಅಜಯ್‌ಸಿಂಗ್ ಬಿಜೆಪಿ ಸೇರಿಸಿಕೊಳ್ಳಬೇಕೋ, ಬೇಡವೋ ಅನ್ನೋದ್ರ ಬಗ್ಗೆ ಯಡಿಯೂರಪ್ಪನವರು ಚರ್ಚಿಸಿದ್ದರು. ಬಿಜೆಪಿ ಪಕ್ಷಕ್ಕೆ ಅಜಯ್‌ಸಿಂಗ್ ಸೇರ್ಪಡೆಯಿಂದ ಒಳ್ಳೆಯದಾದರೆ ಸೇರಿಸಿಕೊಳ್ಳೊಣ ಎಂದು ನಾನು ಹೇಳಿದ್ದೆ. ಕಾಂಗ್ರೆಸ್ ಮುಂದೆ ಇಟ್ಟಿದ್ದ ಬೇಡಿಕೆಗಳನ್ನು ಡಾ ಅಜಯ್‌ಸಿಂಗ್ ಬಿಜೆಪಿಗೂ ಇಟ್ಟಿದ್ದರು ಎಂದರು.
ರಾಜ್ಯ ಬಿಜೆಪಿ ನಾಯಕರ ಮುಂದೆ ಶಾಸಕ ಅಜಯ್‌ಸಿಂಗ್ ಮೂರು ಟಿಕೆಟ್‌ಗಾಗಿ ಡಿಮ್ಯಾಂಡ್ ಮಾಡಿದ್ದರು. ಅಜಯ್‌ಸಿಂಗ್ ಜೇವರ್ಗಿ ಕ್ಷೇತ್ರಕ್ಕೆ, ಸಹೋದರ ವಿಜಯಸಿಂಗ್ ಬಸವಕಲ್ಯಾಣ ಕ್ಷೇತ್ರಕ್ಕೆ, ಭಾವ ಚಂದ್ರಸಿಂಗ್ ಬೀದರ್ ಕ್ಷೇತ್ರಕ್ಕೆ ಟಿಕೆಟ್ ಡಿಮ್ಯಾಂಡ್ ಮಾಡಿದ್ದರು. ಅಂದು ಬಿಜೆಪಿ ಬಾಗಿಲು ತಟ್ಟಿದ ಅಜಯಸಿಂಗ್ ಈಗ ಬಿಜೆಪಿಯನ್ನು ಕೋಮುವಾದಿ ಪಕ್ಷ ಎನ್ನುತ್ತಿದ್ದಾರೆ ಎಂದು ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ ಟೀಕಿಸಿದರು.