ಸೇಡಂ:ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ತಮ್ಮ ಕ್ಷೇತ್ರದ ಬಡ ಜನತೆಗೆ ತಲುಪಿಸುವಂತೆ ಎರಡು ಸಾವಿರ ಹೆಚ್ಚಿನ ಅಕ್ಕಿ ಮತ್ತು ಬೇಳೆ ಕಿಟ್ಗಳನ್ನು ಮಂಗಳವಾರ ಸಹಾಯಕ ಆಯುಕ್ತ ರಮೇಶ ಕೋಲಾರ ಅವರಿಗೆ ಹಸ್ತಾಂತರಿಸಿದ್ದಾರೆ.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊರೊನಾ ಬಗ್ಗೆ ಜನ ಜಾಗೃತಿ ವಹಿಸಬೇಕು. ಕ್ಷೇತ್ರದ ವ್ಯಾಪ್ತಿಯಲ್ಲಿ 1900 ಬಡವರನ್ನು ಗುರುತಿಸಿದ್ದು, ಅವರಿಗೆ ದವಸ ಧಾನ್ಯಗಳ ಕಿಟ್ ತಲುಪಲಿವೆ. ಜೊತೆಗೆ ಪಡಿತರವೂ ಸಹ ದೊರೆಯಲಿದೆ ಎಂದರು.
ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ರೋಗಿಗಳ ಪ್ರಮಾಣ ಹೆಚ್ಚುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಕೂಡಲೇ 400 ಐಸೋಲೇಷನ್ ವಾರ್ಡ್ ಮತ್ತು 200 ವೆಂಟಿಲೇಟರ್ ಒದಗಿಸಬೇಕು ಎಂದಿದ್ದಾರೆ.
2 ಸಾವಿರ ದಿನಸಿ ಕಿಟ್ ಹಂಚಿದ ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಸೇಡಂ ಉಪ ವಿಭಾಗ ವ್ಯಾಪ್ತಿಯಲ್ಲಿನ ಚಿಂಚೋಳಿ, ಚಿತ್ತಾಪುರ ಹಾಗೂ ಸೇಡಂನ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 2000 ನಗದು ಕಾರ್ಮಿಕ ಇಲಾಖೆ ನೀಡಬೇಕು. ಪಡಿತರ ಮತ್ತು ಕಿರಾಣಿ ಅಂಗಡಿಗಳಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು. ಕೈಗಾರಿಕೆಗಳಲ್ಲಿ ಯಾರನ್ನೂ ಸಹ ಕೆಲಸದಿಂದ ತೆಗೆಯಬಾರದು. ಗುತ್ತಿಗೆ ಕಾರ್ಮಿಕರಿಗೂ ಸಹ ಪೂರ್ಣ ವೇತನ ದೊರೆಯುವಂತೆ ಸಹಾಯಕ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ರೈತರಿಂದ ನೇರವಾಗಿ ಹಣ್ಣು, ತರಕಾರಿ ಖರೀದಿಸಿ ಕನಿಷ್ಠ ಬೆಲೆ ನಿಗದಿಪಡಿಸಬೇಕು. ತೊಗರಿಯ ಬಾಕಿ ಹಣ ರೈತರಿಗೆ ನೀಡಬೇಕು. ಕಡಲೆ ಬೀಜ ಖರೀದಿಗೆ ಮುಂದಾಗಬೇಕು. ಕೊರೊನಾದಂತಹ ಮಹಾಮಾರಿ ಕಾಡುತ್ತಿರುವ ಸಂದರ್ಭದಲ್ಲಿ ತಾಲೂಕಿನ ಮಳಖೇಡ, ಮುಧೋಳ, ತೆಲ್ಕೂರ, ಹಾಬಾಳ, ಕುಕ್ಕುಂದಾ, ಕುರಕುಂಟಾದಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆದಿದೆ. ಅದನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದರು.