ಕಲಬುರಗಿ :ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಹೀನಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ಗಳಿಗೆ ಚುನಾವಣೆ ನಡೆಸದೆ ಮುಂದೂಡುವ ಮೂಲಕ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಸರ್ಕಾರವೇ ಖುದ್ದು ತೊಡರಗಾಲು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯ ವಾಣಿಜ್ಯ ಆಯೋಗದ ಶಿಫಾರಸು ಸೇರಿಸಿ ಶೇ.25 ಅನ್ ಟೈಡ್ ಫಂಡ್ ನ್ನು ನಿಗದಿ ಪಡಿಸಲಾಗಿತ್ತು. ಗ್ರಾಮ ಪಂಚಾಯತ್ನಲ್ಲಿ ಭ್ರಷ್ಟಾಚಾರ ತಲೆ ಎತ್ತಬಾರದು ಹಾಗೂ ಉತ್ತಮ ಆಡಳಿತ ಒದಗಿಸುವ ಉದ್ದೇಶದಿಂದ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿಯನ್ನು 30 ತಿಂಗಳಿಗೆ ನಿಗದಿ ಮಾಡಲಾಗಿತ್ತು. ಜೊತೆಗೆ ಸದಸ್ಯರ ಭ್ರಷ್ಟಾಚಾರದಲ್ಲಿ ತೊಡಗಿದ್ದು ದಾಖಲೆ ಸಮೇತ ಸಾಬೀತಾದರೆ ಅವರ ಸದಸ್ಯತ್ವ ರದ್ದು ಮಾಡಲು ಅವಕಾಶ ಇತ್ತು. ಆದರೆ ಬಿಜೆಪಿ ಸರ್ಕಾರ ಪಂಚಾಯತ ರಾಜ್ ವಿಧೇಯಕ ಪಾಸ್ ಮಾಡುವ ಮೂಲಕ ಈ ಹಿಂದಿನ ಕಾಯ್ದೆಯನ್ನು ಜಾರಿಗೊಳಿಸಲು ಬಿಲ್ ಪಾಸ್ ಮಾಡಿದೆ. ಕನಿಷ್ಠ ಒಂದೂವರೆ ವರ್ಷ ಆದರೂ ಕೂಡಾ ತಾ.ಪಂ, ಜಿ.ಪಂ ಚುನಾವಣೆ ಯಾಕೆ ನಡೆಸಿಲ್ಲ.? ಸಂವಿಧಾನದಲ್ಲಿ ಹೇಳಿದಂತೆ ಆರ್ಟಿಕಲ್ 243 (E) ಪ್ರಕಾರ ಸ್ಥಳೀಯ ಸಂಸ್ಥೆಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಬೇಕು. ಆದರೆ ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಜೊತೆಗೆ ಮೀಸಲಾತಿ ಪ್ರಕಟವಾದ ಮೇಲೆ ಕ್ಷೇತ್ರಗಳಿಗ ಪುನರ್ವಿಂಗಡಣೆಗಾಗಿ ಆಯೋಗವನ್ನು ಸ್ಥಾಪಿಸಲಾಗಿದೆ ಎಂದರು.
ಬಿಜೆಪಿ ಸರ್ಕಾರಕ್ಕೆ ಸಂವಿಧಾನದಲ್ಲಿ ನಂಬಿಕೆ ಇಲ್ಲ :
ಅವರು ನೈಸರ್ಗಿಕ ವಿಕೋಪ ಅಥವಾ ಯುದ್ಧದಂತ ಪ್ರಮುಖ ಕಾರಣಗಳಿಲ್ಲದೇ ತಾ.ಪಂ, ಜಿ.ಪಂ. ಗಳಿಗೆ ಚುನಾವಣೆ ಸರ್ಕಾರ ನಡೆಸಲು ಹಿಂದೇಟು ಹಾಕುತ್ತಿದೆ. ಕೊರೊನಾ ಸಂದರ್ಭಲ್ಲಿ ಪ.ಬಂಗಾಳ, ಮಧ್ಯ ಪ್ರದೇಶದಲ್ಲಿ ಚುನಾವಣೆ ಈಗಲೂ ಇಲ್ಲಿಯೂ ಚುನಾವಣೆ ನಡೆಯುತ್ತಿದೆ. ಆದರೆ, ತಾ.ಪಂ, ಜಿ.ಪಂ. ಚುನಾವಣೆ ನಡೆಸಲು ಭಯ ಏಕೆ? ಈ ಮುಂಚೆ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲಾಗಿತ್ತು.
ಮೀಸಲಾತಿ ಪ್ರಕಟಣೆ ಹೊರ ಬಂದ ಮೇಲೆ ಪುನರ್ ವಿಂಗಡನೆ ಮಾಡಲು ಆಯೋಗವನ್ನು ರಚಿಸಿದ್ದಾರೆ. ಬಿಲ್ ನಲ್ಲಿ ಪ್ರಸ್ತಾಪಿಸಿರುವಂತೆ ಚುನಾವಣೆ ಆಯೋಗದ ಮೇಲೆ ಆರೋಪ ಮಾಡಲಾಗಿದೆ. ಮೀಸಲಾತಿಯನ್ನು ನಿಯಮ ಮೀರಿ ಕೊಡಲಾಗಿದೆ ಎಂದು ಬಿಲ್ ನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ತಾ.ಪಂ, ಜಿ.ಪಂ. ಗಳಿಗೆ ಚುನಾವಣೆ ನಡೆಸಲು ಸರ್ಕಾರಕ್ಕೆ ಮನಸಿಲ್ಲ. ಈ ಹಿಂದೆ ಚುನಾವಣೆ ನಡೆದಾಗೆಲ್ಲ ಬಿಜೆಪಿಗೆ ನಿರೀಕ್ಷಿತ ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿಲ್ಲ. ಈಗಲೂ ಅದೇ ಸ್ಥಿತಿ ಇರುವುದರಿಂದ ಚುನಾವಣೆ ನಡೆಸುತ್ತಿಲ್ಲ ಎಂದು ಖರ್ಗೆ ಸಂಶಯ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತದಲ್ಲಿ ಕ್ರಿಯಾಯೋಜನೆ ಮಾಡಲು ಅನುದಾನವಿಲ್ಲ. 15 ನೇ ಹಣಕಾಸು ಆಯೋಗದ ಲಾಭ ಮೋದಿಯವರಿಗೆ ಹೋಗುತ್ತಿದೆ. ಕೇಂದ್ರದ ಯೋಜನೆಗಳಿಗೆ ಗ್ರಾಮ ಪಂಚಾಯತ ಹಣ ಬಸಲಾಗುತ್ತಿದೆ. ಜಲ ಜೀವನ ಮಿಷನ್ ಸೇರಿದಂತೆ (25%) ಬಹುತೇಕ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಗ್ರಾಮ ಪಂಚಾಯತ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಗ್ರಾಪಂ ಗಳಿಗೆ ಅನುದಾನವೇ ನೀಡುತ್ತಿಲ್ಲ ಹಾಗಾಗಿ ನೌಕರರ ಸಂಬಳಕ್ಕೆ ಸಂಚಕಾರ ಬಿದ್ದಿದೆ. ಈ ಹಿಂದೆ ಪ್ರತಿ ಗ್ರಾಮ ಪಂಚಾತಗಳಿಗೆ ರೂ 2 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಇದೂವರೆಗೆ ಆ ಅನುದಾನ ಬಿಡುಗಡೆ ಮಾಡಿಲ್ಲ. ಇಷ್ಟೆಲ್ಲ ಮಾಡಿದ ಮೇಲೆ ಸ್ವರಾಜ್ ಹೆಸರಲ್ಲಿ ಬಿಜೆಪಿ ಕಾರ್ಯಕ್ರಮ ನಡೆಸಿದೆ ಎಂದು ವ್ಯಂಗ್ಯವಾಡಿದರು.
1.11ಲಕ್ಷ ಕೋಟಿ ಅನುದಾನವನ್ನ ನರೇಗಾ ಯೋಜನೆಗಳಿಗೆ ಮೀಸಲಿಡಲಾಗಿತ್ತು. ಆದರೆ ಈ ಸಲ ಕೇವಲ 73 ಸಾವಿರ ಕೋಟಿ ಮಾತ್ರ ಮೀಸಲಿಡಲಾಗಿದೆ. ವಸತಿ ಯೋಜನೆಗಳಿಗೆ ಹೊಸ ಮನೆಗಳು ಮಂಜೂರಾಗಿಲ್ಲ. ಈ ಹಿಂದೆ ನಾವು ಅಧಿಕಾರದಲ್ಲಿರುವಾಗ ಮಂಜೂರು ಮಾಡಿದ ಯೋಜನೆಗಳಿಗೆ ಈ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದರು.