ಕಲಬುರಗಿ:ಬಜರಂಗ ದಳ ಸಂಘಟನೆ ನಿಷೇಧಿಸುವ ಕಾಂಗ್ರೆಸ್ ಪಕ್ಷದ ಧೋರಣೆ ಖಂಡಿಸಿ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಪ್ರತಿಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರದ್ರೋಹಿ ಪ್ರಣಾಳಿಕೆ ಎದುರಿಟ್ಟುಕೊಂಡು ಚುನಾವಣೆಗೆ ಹೊರಟಿದೆ. ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವ ಪಿಎಫ್‌ಐ ಪರವಾಗಿರುವ ಕಾಂಗ್ರೆಸ್ ಈಗ ರಾಷ್ಟ್ರಭಕ್ತ ಬಜರಂಗ ದಳ ನಿಷೇಧಿಸುವ ಮಾತನಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಪ್ರತಿಗೆ ಬೆಂಕಿಯಿಟ್ಟರು.
ನಂತರ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ಪ್ರಣಾಳಿಕೆಯನ್ನು ಮಹಮ್ಮದ್ ಅಲಿ ಜಿನ್ನಾ ಪ್ರಣಾಳಿಕೆ ಎಂದು ವ್ಯಾಖ್ಯಾನಿಸಿದರಲ್ಲದೇ, ಇಂತಹ ರಾಷ್ಟ್ರ ವಿರೋಧಿ ಪ್ರಣಾಳಿಕೆ ಕೂಡಲೇ ಹಿಂಪಡೆಯಬೇಕು ಎಂದು ತಾಕೀತು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷದಲ್ಲಿಯೂ ಕೆಲವು ರಾಷ್ಟ್ರ ಭಕ್ತರು ಇದ್ದಾರೆ. ಆದರೆ, ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಂತಹ ಜಾತಿವಾದಿಗಳ ಕೈಯಲ್ಲಿ ಕಾಂಗ್ರೆಸ್ ಪಕ್ಷ ಸಿಕ್ಕಿಕೊಂಡಿದೆ. ಆ ಮೂಲಕ ಆ ಪಕ್ಷದ ಚುನಾವಣಾ ಪ್ರಣಾಳಿಕೆ ಎಂಬುದು 'ಹಿಂದೂ ವರ್ಸಸ್ ಮುಸ್ಲಿಂ ಚುನಾವಣೆ' ಎನ್ನುವಂತಾಗಿದೆ ಎಂದು ಅವರು ಹರಿಹಾಯ್ದರು.
ಹಾಗೊಂದು ವೇಳೆ, ಕಾಂಗ್ರೆಸ್ ಪಕ್ಷದ ನೀಯತ್ತು ಸ್ಪಷ್ಟವಾಗಿದ್ದರೆ ನಮಗೆ ಹಿಂದೂಗಳ ಮತ ಬೇಡ ಎಂದು ಘೋಷಿಸಲಿ ಎಂದು ಸವಾಲು ಹಾಕಿದ ಈಶ್ವರಪ್ಪ, ನಮಗೆ ರಾಷ್ಟ್ರದ್ರೋಹಿ ಮುಸ್ಲಿಂ ಮತಗಳು ಬೇಕಿಲ್ಲ. ನಮಗೇನಿದ್ದರೂ ರಾಷ್ಟ್ರಭಕ್ತ ಮುಸ್ಲಿಮರ ಮತ ಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ರಾಷ್ಟ್ರದ್ರೋಹಿ:ಈ ದೇಶದಲ್ಲಿ ಪಿಎಫ್‌ಐ ಒಂದು ನಿಷೇಧಿತ ಸಂಘಟನೆ ಎಂಬುದು ಕೂಡ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ. ಈ ಹಿಂದೆ ಪಿಎಫ್ಐ ಮುಖಂಡರ ಮೇಲಿದ್ದ 173 ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು. ದೇಶದ್ರೋಹಿ ಕೃತ್ಯಗಳನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷಕ್ಕೆ ‘ಸಂವಿಧಾನವೇ ಪವಿತ್ರ’ ಎಂದು ಹೇಳುವ ಯಾವುದೇ ಅಧಿಕಾರವಿಲ್ಲ. ಪಿಎಫ್‌ಐ ಒಂದು ರಾಷ್ಟ್ರದ್ರೋಹಿ ಸಂಘಟನೆ ಎನ್ನುವ ಕಾರಣಕ್ಕಾಗಿ ಬಿಜೆಪಿ ಸರ್ಕಾರ ಆ ಸಂಘಟನೆಯನ್ನು ನಿಷೇಧಿಸಿದೆ. ಮತ್ತೊಂದೆಡೆ, ಆಂಜನೇಯನ ಬಾಲಕ್ಕೆ ರಾವಣ ಬೆಂಕಿಯಿಟ್ಟ, ರಾವಣ ಅಧಿಕಾರ ಕಳೆದುಕೊಂಡ ರೀತಿಯಲ್ಲೇ ಬಜರಂಗ ದಳ ನಿಷೇಧಿಸುವ ಮಾತನಾಡಿರುವ ಕಾಂಗ್ರೆಸ್ ಈ ಬಾರಿ ವಿರೋಧ ಪಕ್ಷದ ಸ್ಥಾನ ಪಡೆಯುವಷ್ಟು ಸಹ ಸ್ಥಾನ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.