ಕಲಬುರಗಿ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲು ತೆರಳಿದ ವೇಳೆ ಪಿಎಸ್ಐಯಿಂದ ಲೋಡೆಡ್ ಸರ್ವಿಸ್ ರಿವಾಲ್ವಾರ್ ಕಸಿದುಕೊಂಡು ಅಂತಾರಾಜ್ಯ ಕುಖ್ಯಾತ ಕಳ್ಳನೋರ್ವ ಪರಾರಿಯಾದ ಘಟನೆ ಭಾನುವಾರ ಸಂಜೆ ಅಫಜಲಪುರದಲ್ಲಿ ನಡೆದಿದೆ. ಇಂದು ರಿವಾಲ್ವಾರ್ ಜೊತೆಗೆ ಮರವೇರಿ ಕುಳಿತಿರುವ ಬಗ್ಗೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಸುತ್ತುವರೆದು ಸುರಕ್ಷಿತವಾಗಿ ಮರದಿಂದ ಕೆಳಗೆ ಇಳಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದ ಖಾಜಪ್ಪ ಗಾಯಕವಾಡ ಬಂಧಿತ ಆರೋಪಿ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ ಸೇರಿ ಇತರೆ ರಾಜ್ಯಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿದಂತೆ ವಿವಿಧೆಡೆ 20ಕ್ಕೂ ಅಧಿಕ ಕಳ್ಳತನ ಪ್ರಕರಣ ದಾಖಲಾಗಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲು ಭಾನುವಾರ ಬೆಂಗಳೂರಿನಿಂದ ಸಿಸಿಬಿ ಪೊಲೀಸರ ತಂಡ ಆಗಮಿಸಿತ್ತು.
ಸರ್ವಿಸ್ ರಿವಾಲ್ವಾರ್ಕಸಿದುಕೊಂಡು ಖಾಜಪ್ಪ ಪರಾರಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಹತ್ತಿರ ಕಾರಿನಲ್ಲಿ ಕುಳಿತಿದ್ದ ಖಾಜಪ್ಪನನ್ನು ಬಂಧಿಸಲು ಸಿಸಿಬಿ ಪೊಲೀಸರು ತೆರಳಿದ್ದರು. ಅಫಜಲಪುರ ಪಿಎಸ್‌ಐ ಭೀಮರಾಯ್ ಬಂಕಲಿ ಇವರ ಜೊತೆಗೆ ಇದ್ದರು. ಕಾರ್ ಗ್ಲಾಸ್ ಏರಿಸಿಕೊಂಡಿದ್ದ ಖಾಜಪ್ಪನಿಗೆ ಶರಣಾಗಲು ಪೊಲೀಸರು ಹೇಳಿದ್ರೂ ಕೂಡಾ ಶರಣಾಗಿರಲಿಲ್ಲ. ಹೀಗಾಗಿ ಪಿಎಸ್‌ಐ ಭೀಮರಾಯ್ ಬಂಕಲಿ ತಮ್ಮ ಸರ್ವಿಸ್ ರಿವಾಲ್ವಾರ್ದಿಂದ ಗ್ಲಾಸ್ ಒಡೆಯಲು ಪ್ರಯತ್ನ ನಡೆಸಿದಾಗ ಅವರ ಸರ್ವಿಸ್ ರಿವಾಲ್ವಾರ್ ಕಸಿದುಕೊಂಡು ಖಾಜಪ್ಪ ಪರಾರಿಯಾಗಿದ್ದ.
ಎಸ್ಪಿ ಇಶಾ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ:ರಾತ್ರಿ ಇಡೀ ಪೊಲೀಸರ ತಂಡ ಶೋಧ ಕಾರ್ಯ ನಡೆಸಿದರೂ ಖಾಜಪ್ಪ ಪತ್ತೆ ಆಗಿರಲಿಲ್ಲ. ಬುಲೆಟ್ ತುಂಬಿದ ಸರ್ವಿಸ್ ರಿವಾಲ್ವಾರ್ ಜೊತೆಗೆ ಪರಾರಿಯಾದ ಹಿನ್ನೆಲೆ ಆತಂಕ ಹೆಚ್ಚಿಸಿತ್ತು. ಹೀಗಾಗಿ ಸೋಮವಾರ ಬೆಳಗ್ಗೆಯಿಂದಲೇ ಪೊಲೀಸರು ಶೋಧಕಾರ್ಯ ಚುರುಕುಗೊಳಿಸಿದ್ದರು. ಅಫಜಲಪುರ ತಾಲೂಕಿನ ಹಲವಡೆ ಹಾಗೂ ಪಕ್ಕದ ಮಹಾರಾಷ್ಟ್ರದ ದುದಣಿಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಸ್ಥಳಕ್ಕೆ ಎಸ್ಪಿ ಇಶಾ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಶೋಧ ಕಾರ್ಯದಲ್ಲಿ ತೊಡಗಿದ್ದರು.