ಕಲಬುರಗಿ:ನಟ ಪುನೀತ್ ರಾಜ್ಕುಮಾರ್ ಅವರು ಅಗಲಿ ಎರಡು ತಿಂಗಳು ಕಳೆದರೂ ಅವರಿಲ್ಲ ಎಂಬ ಕೊರಗು ಇನ್ನೂ ಮಾಸಿಲ್ಲ. ಅಪ್ಪು ಹೆಸರನ್ನು ಅಮರವಾಗಿಸುವ ಕೆಲಸ ಎಲ್ಲೆಡೆ ನಡೆಯುತ್ತಿದ್ದು, ರಸ್ತೆ, ವೃತ್ತ, ಪಾರ್ಕ್ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪುನೀತ್ ರಾಜ್ಕುಮಾರ್ ಹೆಸರಿಡಲಾಗಿದೆ. ಈಗ ಕಲಬುರಗಿಯ ದಂಪತಿ ತಮ್ಮ ಮಗುವಿಗೆ ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದ ಸಿದ್ದು ಮತ್ತು ಕಾವೇರಿ ದಂಪತಿ ತಮ್ಮ ಮೊದಲನೇ ಮಗನಿಗೆ ಪುನೀತ್ ರಾಜ್ಕುಮಾರ್ ಅಂತ ಹೆಸರಿಟ್ಟಿದ್ದಾರೆ. ಈ ದಂಪತಿಗೆ ಡಿಸೆಂಬರ್ 5ರಂದು ಗಂಡು ಮಗು ಜನಿಸಿದೆ.
ಹೆರಿಗೆಗೂ ಮೊದಲೇ ಗಂಡು ಮಗುವಾದರೆ ಪುನೀತ್ ಹೆಸರು ಇಡುವ ಬಗ್ಗೆ ದಂಪತಿ ನಿರ್ಧಾರ ಮಾಡಿದ್ದರು. ಆ ಮೂಲಕ ಅಪ್ಪು ಮೇಲಿನ ಅಭಿಮಾನವನ್ನು ಮೆರೆದಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ದಂಪತಿ ಮತ್ತು ಮಗುವಿನ ಫೋಟೋಗಳು ವೈರಲ್ ಆಗುತ್ತಿವೆ. ಪುನೀತ್ ಅವರ ಮೇಲಿನ ಅಭಿಮಾನ ಎಂತಹದ್ದು ಎಂಬುದು ಇಂತಹ ಘಟನೆಗಳಿಂದ ಸಾಬೀತಾಗುತ್ತಿದೆ.
ಪುನೀತ್ ನಿಧನರಾಗಿ ಎರಡು ತಿಂಗಳು ಕಳೆದಿದ್ದರೂ ಕೂಡ ಅವರ ನೂರಾರು ಅಭಿಮಾನಿಗಳು ಇಂದಿಗೂ ಕೂಡ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಪ್ಪು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ:ಎರಡನೇ ಮಗುವಿನ ನಿರೀಕ್ಷೆ; ಸಿಹಿ ಸುದ್ದಿ ಹಂಚಿಕೊಂಡ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ